ಬಾಲ್ಯವಿವಾಹಕ್ಕೆ ಮನ್ನಣೆ ನೀಡುವ ಮಸೂದೆಗೆ ರಾಜಸ್ಥಾನ ಅಸ್ತು!
* ವರನಿಗೆ 21, ವಧುವಿಗೆ 18 ವರ್ಷ ಆಗಿರದಿದ್ದರೂ ಮದುವೆ ನೋಂದಣಿಗೆ ಅವಕಾಶ
* ಬಾಲ್ಯವಿವಾಹಕ್ಕೆ ಮನ್ನಣೆ ನೀಡುವ ಮಸೂದೆಗೆ ರಾಜಸ್ಥಾನ ಅಸ್ತು
ಜೈಪುರ(ಸೆ.19): ಅಪ್ರಾಪ್ತ ವಯಸ್ಕರು ಕೂಡ ತಮ್ಮ ಮದುವೆಯನ್ನು ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡುವ ಕಡ್ಡಾಯ ಮದುವೆ ನೋಂದಣಿ (ತಿದ್ದುಪಡಿ) ಮಸೂದೆಯನ್ನು ರಾಜಸ್ಥಾನ ಸರ್ಕಾರ ಅಂಗೀಕರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಪ್ರತಿಪಕ್ಷ ಬಿಜೆಪಿ, ತಿದ್ದುಪಡಿ ಮೂಸೂದೆ ಬಾಲ್ಯ ವಿವಾಹವನ್ನು ಕಾನೂನು ಸಮ್ಮತಗೊಳಿಸಲಿದೆ ಎಂದು ಆರೋಪಿಸಿದೆ.
ವಿಧಾನಸಭೆಯಲ್ಲಿ ಗದ್ದಲದ ಮಧ್ಯೆಯೇ 2009ರ ಮದುವೆ ನೋಂದಣಿ ಕಾಯ್ದೆ- 2009ಕ್ಕೆ ತಿದ್ದುಪಡಿ ಮಾಡಲಾದ ರಾಜಸ್ಥಾನ ಕಡ್ಡಾಯ ವಿವಾಹ ನೋಂದಣಿ (ತಿದ್ದುಪಡಿ) ಮಸೂದೆ- 2021 ಅನ್ನು ಧ್ವನಿ ಮತದಿಂದ ಅಂಗೀಕರಿಸಲಾಯಿತು.
ನೂತನ ಮಸೂದೆಯ ಪ್ರಕಾರ, ಮದುವೆ ಆದ 30 ದಿನಗಳಲ್ಲಿ ವಧು ಮತ್ತು ವರ ಸ್ಥಳೀಯ ಮದುವೆ ನೋಂದಣಿ ಕಚೇರಿಯಲ್ಲಿ ತಮ್ಮ ವಿವಾಹವನ್ನು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಅಲ್ಲದೇ ಮದುವೆ ಆದ ಬಳಿಕ ಹೊಸ ಪ್ರದೇಶದಲ್ಲಿ ಒಂದು ತಿಂಗಳಿಗಿಂತ ಹೆಚ್ಚಿನ ಅವಧಿ ನೆಲೆಸಿದ್ದರೆ ಅಂಥವರು ಕೂಡ ಮದುವೆ ನೋಂದಣಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಏನಿದು ವಿವಾದ?:
ಬಾಲ್ಯ ವಿವಾಹ ಕೂಡ ಮಸೂದೆಯ ವ್ಯಾಪ್ತಿಗೆ ಬರಲಿದೆ. ಮಸೂದೆಯಲ್ಲಿ ಉಲ್ಲೇಖಿಸಿರುವಂತೆ ವರನಿಗೆ 21 ವರ್ಷ ಆಗಿರದೇ ಇದ್ದರೂ ಅಥವಾ ವಧುವಿಗೆ 18 ವರ್ಷ ಪೂರ್ಣ ತುಂಬಿಲ್ಲದೇ ಇದ್ದರೂ ಮದುವೆ ಆದ 30 ದಿನದಲ್ಲಿ ಪಾಲಕರು ಅಥವಾ ಪೋಷಕರು ಆ ಮದುವೆಯನ್ನು ನೋಂದಣಿ ಮಾಡಿಕೊಳ್ಳುವುಕ್ಕೆ ಅವಕಾಶ ಇದೆ. ಈ ಮಸೂದೆಯನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿದ್ದು, ಬಾಲ್ಯ ವಿವಾಹ ನೋಂದಣಿಗೆ ಮಸೂದೆಯಲ್ಲಿ ಅವಕಾಶ ನೀಡಿದ್ದೇಕೆ ಎಂದು ಪ್ರಶ್ನಿಸಿದೆ.
ಇದೇ ವೇಳೆ ಮಸೂದೆಯನ್ನು ಸಮರ್ಥಿಸಿಕೊಂಡಿರುವ ಸಂಸದೀಯ ವ್ಯವಹಾರಗಳ ಸಚಿವ ಶಾಂತಿ ಕುಮಾರ್, ಮದುವೆಯ ಬಳಿಕ ನೋಂದಣಿ ಮಾಡಿಕೊಳ್ಳುವುದು ಮಾತ್ರವೇ ಕಡ್ಡಾಯವಾಗಿದೆ. ಹಾಗೆಂದ ಮಾತ್ರಕ್ಕೆ ಮಸೂದೆ ಬಾಲ್ಯ ವಿವಾಹಕ್ಕೆ ಮಾನ್ಯತೆ ನೀಡಲಿದೆ ಎಂಬ ಅರ್ಥವಲ್ಲ. ಒಂದು ವೇಳೆ ಜಿಲ್ಲಾಧಿಕಾರಿ ಬಯಸಿದರೆ ಬಾಲ್ಯವಿವಾಹದ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.