ಕಾರ್ಯಕರ್ತರ ಮೇಲೆ ಪಕ್ಷಕ್ಕೆ ಹಿಡಿತ ಇಲ್ಲ, ಬಿಜೆಪಿ ತೊರೆದ ನಾಯಕಿ!
* ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ
* ನೂಪುರ್ ಶರ್ಮಾ ಹೇಳಿಕೆ ವಿರೋಧಿಸಿ ಪಕ್ಷಕ್ಕೆ ರಾಜೀನಾಮೆ ಕೊಟ್ಟ ಬಿಜೆಪಿ ನಾಯಕಿ
* ಕಾರ್ಯಕರ್ತರ ಮೇಲೆ ಪಕ್ಷಕ್ಕೆ ಹಿಡಿತ ಇಲ್ಲ ಎಂದು ಕಿಡಿ
ಜೈಪುರ(ಜೂ.14) ಪ್ರವಾದಿ ಮೊಹಮ್ಮದ್ ಬಗ್ಗೆ ನೂಪುರ್ ಶರ್ಮಾ ಅವರ ಹೇಳಿಕೆಯನ್ನು ವಿರೋಧಿಸಿ ರಾಜಸ್ಥಾನ ಬಿಜೆಪಿಯ ಮಹಿಳಾ ಕೌನ್ಸಿಲರ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಕೋಟಾದ 14ನೇ ವಾರ್ಡ್‌ನ ಕೌನ್ಸಿಲರ್ ತಬಸ್ಸುಮ್ ಮಿರ್ಜಾ ಸೋಮವಾರ ತಮ್ಮ ರಾಜೀನಾಮೆಯನ್ನು ಪಕ್ಷದ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಮತ್ತು ಜಿಲ್ಲಾಧ್ಯಕ್ಷ ಕೃಷ್ಣ ಕುಮಾರ್ ಸೋನಿ ಅವರಿಗೆ ಕಳುಹಿಸಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ತಬಸ್ಸುಮ್ ಮಿರ್ಜಾ ಜಿಲ್ಲಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಪಕ್ಷದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದರು. ಪ್ರವಾದಿಯನ್ನು ಟೀಕಿಸುತ್ತಿರುವ ಬಿಜೆಪಿ ಕಾರ್ಯಕರ್ತರನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ.
ಇಷ್ಟೆಲ್ಲಾ ಆದರೂ ನಾನು ಬಿಜೆಪಿಯ ಸದಸ್ಯಳಾಗೇ ಉಳಿದು ಪ್ರವಾದಿ ವಿರುದ್ಧದ ಹೊರತಾಗಿಯೂ ನಾನು ಪಕ್ಷವನ್ನು ಬೆಂಬಲಿಸಿದರೆ, ನನಗಿಂತ ದೊಡ್ಡ ಅಪರಾಧಿ ಯಾರೂ ಇರುವುದಿಲ್ಲ ಎಂದು ಅವರು ಹೇಳಿದರು. ಇಂತಹ ಪರಿಸ್ಥಿತಿಯಲ್ಲಿ ನಾನು ಇನ್ನು ಮುಂದೆ ಈ ಪಕ್ಷದೊಂದಿಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಇಮೇಲ್ ಮತ್ತು ಪೋಸ್ಟ್ ಮೂಲಕ ರಾಜೀನಾಮೆ ಘೋಷಿಸಿದ್ದಾರೆ.
ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮೊಹಮ್ಮದ್ ಬಗ್ಗೆ ನೂಪುರ್ ಶರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ್ದರು ಎಂಬುವುದು ಉಲ್ಲೇಖನೀಯ. ಅಂದಿನಿಂದ ದೇಶದಲ್ಲಿ ವಿವಾದ ಮುಂದುವರಿದಿದೆ. ಕುವೈತ್, ಕತಾರ್, ಪಾಕಿಸ್ತಾನ ಸೇರಿದಂತೆ ಹಲವು ಮುಸ್ಲಿಂ ರಾಷ್ಟ್ರಗಳೂ ಹೇಳಿಕೆ ನೀಡಿ ಖಂಡಿಸಿವೆ. ಇದಾದ ಬಳಿಕ ಬಿಜೆಪಿ ನೂಪುರ್ ಶರ್ಮಾ ಅವರನ್ನು ಅಮಾನತು ಮಾಡಿತ್ತು.
ನೂಪುರ್‌ಗೆ ಜೂ.25ಕ್ಕೆ ವಿಚಾರಣೆಗೆ ಬುಲಾವ್
ಪ್ರವಾದಿ ಅವಹೇಳನ ಮಾಡಿದ ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬಂಧಿಸುವಂತೆ ಆಗ್ರಹಿಸಿ ದೇಶಾದ್ಯಂತ ಭಾರೀ ಪ್ರತಿಭಟನೆಯಾದ ಬೆನ್ನಲ್ಲೇ ಮುಂಬೈ ಪೊಲೀಸರು ಆಕೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೂ. 25ರಂದು ವಿಚಾರಣೆಗೆ ಹಾಜರಾಗುವಂತೆ ನೂಪುರ್‌ಗೆ ಶನಿವಾರ ಸಮನ್ಸ್ ಜಾರಿ ಮಾಡಿದ್ದಾರೆ.
ಕಟ್ಟೆಚ್ಚರ ವಹಿಸಿ: ಪೊಲೀಸರಿಗೆ ಕೇಂದ್ರ ಸೂಚನೆ
ಪ್ರವಾದಿ ಅವಹೇಳನ ಮಾಡಿದ ನೂಪುರ್ ಶರ್ಮಾ ವಿರುದ್ಧ ದೇಶಾದ್ಯಂತ ಭಾರೀ ಪ್ರತಿಭಟನೆ, ಹಿಂಸಾಚಾರ ನಡೆದ ಬೆನ್ನಲ್ಲೇ ಗೃಹ ಸಚಿವಾಲಯವು ಕಟ್ಟೆಚ್ಚರ ವಹಿಸುವಂತೆ ಎಲ್ಲ ರಾಜ್ಯಗಳ ಪೊಲೀಸರಿಗೆ ಸೂಚಿಸಿದೆ.
ಅಲ್ಲದೆ, ‘ಗಲಭೆಯ ವೇಳೆ ಪೊಲೀಸರ ಮೇಲೂ ದಾಳಿ ನಡೆಯುವ ಸಾಧ್ಯತೆಯಿರುವುದರಿಂದ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೊಲೀಸರು ಹಾಗೂ ಅರೆಸೇನಾ ಪಡೆಗಳು ಸನ್ನದ್ಧ ಸ್ಥಿತಿಯಲ್ಲಿರಬೇಕು’ ಎಂದು ನಿರ್ದೇಶಿಸಿದೆ.
‘ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಭಾಷಣ ಮಾಡುವ ವ್ಯಕ್ತಿಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಇಲಾಖೆಗೆ ಈಗಾಗಲೇ ಸೂಚಿಸಲಾಗಿದೆ’ ಎಂದು ಗೃಹ ಅಧಿಕಾರಿಗಳು ಹೇಳಿದ್ದಾರೆ.