ಹಿಮಾಚಲದಲ್ಲಿ ಮತ್ತೆ ಮಳೆ, ಮೇಘಸ್ಫೋಟ: 50+ ಬಲಿ, ರೆಡ್ ಅಲರ್ಟ್ ಘೋಷಣೆ
ಕಳೆದ ತಿಂಗಳು ಹಿಮಾಚಲ ಪ್ರದೇಶದಲ್ಲಿ ಭಾರೀ ಅನಾಹುತ ಸೃಷ್ಟಿಸಿದ್ದ ಮುಂಗಾರು ಮಳೆ ಮತ್ತೆ ಅಬ್ಬರಿಸಿದೆ. ಧಾರಾಕಾರ ಮಳೆ ಹಾಗೂ ಮೇಘಸ್ಫೋಟದಿಂದ ಭಾನುವಾರ ರಾತ್ರಿಯಿಂದೀಚೆಗೆ 50ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.

ಶಿಮ್ಲಾ/ಡೆಹ್ರಾಡೂನ್ (ಆ.15): ಕಳೆದ ತಿಂಗಳು ಹಿಮಾಚಲ ಪ್ರದೇಶದಲ್ಲಿ ಭಾರೀ ಅನಾಹುತ ಸೃಷ್ಟಿಸಿದ್ದ ಮುಂಗಾರು ಮಳೆ ಮತ್ತೆ ಅಬ್ಬರಿಸಿದೆ. ಧಾರಾಕಾರ ಮಳೆ ಹಾಗೂ ಮೇಘಸ್ಫೋಟದಿಂದ ಭಾನುವಾರ ರಾತ್ರಿಯಿಂದೀಚೆಗೆ 50ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಇದೇ ವೇಳೆ ಉತ್ತರಾಖಂಡದಲ್ಲೂ ಭಾರಿ ಮಳೆ ಸುರಿದಿದ್ದು, ಮೂವರು ಸಾವನ್ನಪ್ಪಿದ್ದಾರೆ. ಹೀಗಾಗಿ ಚಾರ್‌ಧಾಮ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಈ ನಡುವೆ, ಮಂಗಳವಾರ ಹಿಮಾಚಲದ 8 ಹಾಗೂ ಉತ್ತರಾಖಂಡದ 6 ಜಿಲ್ಲೆಗಳಲ್ಲಿ ರೆಡ್ ಅಲರ್ಚ್ ಮತ್ತು ಉತ್ತರಾಖಂಡದ 1 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಚ್ ಮುನ್ಸೂಚನೆ ನೀಡಲಾಗಿದೆ.
ಶನಿವಾರ ಸಂಜೆಯಿಂದ ಹಿಮಾಚಲದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಆಸ್ತಿಪಾಸ್ತಿಗೂ ಹಾನಿಯಾಗಿದೆ. ಮಳೆ, ಭೂಕುಸಿತ ಹಿನ್ನೆಲೆಯಲ್ಲಿ ರಾಜ್ಯದ 752 ರಸ್ತೆಗಳನ್ನು ಸಂಚಾರಕ್ಕೆ ನಿರ್ಬಂಧಿಸಲಾಗಿದೆ. ಭಾರೀ ಮಳೆ, ಸಾವು ನೋವಿನ ಕುರಿತು ಹಿಮಾಚಲ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಜೊತೆಗೆ ಭೂಕುಸಿತದ ಘಟನಾ ಸ್ಥಳಗಳಿಗೆ ಭೇಟಿ ನೀಡಿ, ಪರಿಹಾರ ಕಾರ್ಯ ವೀಕ್ಷಿಸುವುದರ ಜೊತೆಗೆ ನೊಂದವರಿಗೆ ಸಾಂತ್ವನ ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎರಡೂ ರಾಜ್ಯಗಳಿಗೆ ನೆರವಿನ ಭರವಸೆ ನೀಡಿದ್ದಾರೆ.
ಸೇವಾ ಮನೋಭಾವದ ವೈದ್ಯರು ಸಂಖ್ಯೆ ಹೆಚ್ಚಾಗಲಿ: ಸಚಿವ ಪರಮೇಶ್ವರ್
ಹಿಮಾಚಲದಲ್ಲಿ ಮಳೆ, ಮೇಘ ಸ್ಫೋಟ: ಶನಿವಾರ ಸಂಜೆಯಿಂದಲೂ ಹಿಮಾಚಲದ ಹಲವು ಕಡೆಯಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು, ಭಾನುವಾರ ಅದು ಇನ್ನಷ್ಟುತೀವ್ರಗೊಂಡಿದೆ. ಭಾನುವಾರ ಸಂಜೆ ಬಳಿಕ ಕಂಗ್ರಾದಲ್ಲಿ 273 ಮಿ.ಮೀ, ಧರ್ಮಶಾಲಾದಲ್ಲಿ 250 ಮಿ.ಮೀ, ಸುಂದರ್‌ನಗರದಲ್ಲಿ 168 ಮಿ.ಮೀ, ಮಂಡಿಯಲ್ಲಿ 140 ಮಿ.ಮೀ, ಜುಬ್ಬರ್‌ಹಟ್ಟಿಯಲ್ಲಿ 132 ಮಿ.ಮೀ, ಶಿಮ್ಲಾದಲ್ಲಿ 126 ಮಿ.ಮೀ, ಬೇರ್ತಿನ್‌ನಲ್ಲಿ 120 ಮಿ.ಮೀ.ನಷ್ಟುಭಾರೀ ಮಳೆ ಸುರಿದಿದ್ದು ಹಲವು ಕಡೆ ಭೂಕುಸಿತಕ್ಕೆ ಕಾರಣವಾಗಿದೆ.
ಶಿವ ದೇಗುಲ ದೇಗುಲ ಭೂಸಮಾಧಿ, 14 ಬಲಿ: ಹಿಮಾಚಲದ ಶಿಮ್ಲಾದ ಸಮರ್ ಹಿಲ್ ಪ್ರದೇಶದಲ್ಲಿನ ಪ್ರಸಿದ್ಧ ಶಿವದೇಗುಲದ ಬಳಿ ಸೋಮವಾರ ಭೂಕುಸಿತ ಸಂಭವಿಸಿದ್ದು, ಪರಿಣಾಮ ದೇಗುಲ ಭೂಸಮಾಧಿಯಾಗಿದೆ. ಶ್ರಾವಣ ಮಾಸವಾಗಿರುವ ಹಿನ್ನೆಲೆಯಲ್ಲಿ ದೇಗುಲದಲ್ಲಿ ಸಾಕಷ್ಟುಭಕ್ತರು ಸೇರಿದ್ದು ಇದೇ ಹೊತ್ತಿನಲ್ಲಿ ದುರ್ಘಟನೆ ಸಂಭವಿಸಿದೆ. ಭೂಕುಸಿತದ ವೇಳೆ 14 ಜನರು ಸಾವನ್ನಪ್ಪಿದ್ದು, ಇನ್ನೂ 15 ಜನರು ಅವಶೇಷಗಳ ಅಡಿಯಲ್ಲಿ ಸಿಕ್ಕಿರುವ ಶಂಕೆ ವ್ಯಕ್ತವಾಗಿದೆ. ಶಿಮ್ಲಾದ ಫಾಗ್ಲಿ ಪ್ರದೇಶದಲ್ಲೂ ಭೂಕುಸಿತ ಸಂಭವಿಸಿ ಹಲವು ಮನೆಗಳು ಭೂಸಮಾಧಿಯಾಗಿವೆ.
ಸೋಲನ್‌ನಲ್ಲಿ ಮೇಘ ಸ್ಫೋಟಕ್ಕೆ 7 ಬಲಿ: ಹಿಮಾಚಲದ ಸೋಲನ್ ಜಿಲ್ಲೆಯ ಜಡೋನ್ ಗ್ರಾಮದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭಾರೀ ಮೇಘಸ್ಫೋಟಕ್ಕೆ ಒಂದೇ ಕುಟುಂಬದ 7 ಜನರು ಬಲಿಯಾಗಿದ್ದಾರೆ. ಮೇಘಸ್ಫೋಟದಿಂದಾಗಿ 2 ಮನೆಗಳು ಕೊಚ್ಚಿಹೋಗಿದ್ದು, ಇದರಲ್ಲಿದ್ದ 7 ಜನರು ಪ್ರವಾಹದಲ್ಲಿ ನೀರು ಪಾಲಾಗಿದ್ದಾರೆ. ಇತರೆ 6 ಜನರನ್ನು ರಕ್ಷಿಸಲಾಗಿದೆ. ಪ್ರವಾಹದ ಭಯಾನಕ ವಿಡಿಯೋವನ್ನು ಮುಖ್ಯಮಂತ್ರಿ ಸುಖು ಶೇರ್ ಮಾಡಿದ್ದಾರೆ. ಇನ್ನು ಇದೇ ಜಿಲ್ಲೆಯ ಬಲೇರಾ ಪಂಚಾಯತ್ ವ್ಯಾಪ್ತಿಯಲ್ಲಿ ಭೂಕುಸಿತದಿಂದ ಗುಡಿಸಲು ಕುಸಿದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.
ಬನಾಲ್ ಗ್ರಾಮದಲ್ಲಿ ಮಹಿಳೆಯೊಬ್ಬರು ಭೂಕುಸಿತಕ್ಕೆ ಸಿಕ್ಕು ಸಾವನ್ನಪ್ಪಿದ್ದಾರೆ. ಹಮೀರ್‌ಪುರದಲ್ಲಿ ಭಾರೀ ಮಳೆಯಿಂದಾಗಿ ಸಂಭವಿಸಿದ ದುರ್ಘಟನೆಗಳಲ್ಲಿ 3 ಜನರು ಸಾವನ್ನಪ್ಪಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಮಂಡಿ ಜಿಲ್ಲೆಯಲ್ಲೂ ಭಾರೀ ಭೂಕುಸಿತದ ಪರಿಣಾಮ ಸೆಗ್ಲಿ ಪಂಚಾಯತ್ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿ 7 ಜನರು ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ. ಹಿಮಾಚಲಪ್ರದೇಶದಲ್ಲಿ ಈ ವರ್ಷದ ಮುಂಗಾರು ವೇಳೆ ಸಂಭವಿಸಿದ ದುರ್ಘಟನೆಗಳಿಂದ 7 ಸಾವಿರ ಕೋಟಿ ರು.ಗೂ ಹೆಚ್ಚಿನ ಹಾನಿಯಾಗಿದೆ ಎಂದು ಸರ್ಕಾರ ಅಂದಾಜಿಸಿದೆ.
ಉತ್ತರಾಖಂಡದಲ್ಲಿ 3 ಬಲಿ, ಚಾರ್‌ಧಾಮ ಯಾತ್ರೆ ಸ್ಥಗಿತ: ಉತ್ತರಾಖಂಡದಲ್ಲೂ ಭಾರಿ ಮಳೆ ಆಗಿದ್ದು ಹೃಷಿಕೇಶದಲ್ಲಿ ಇಬ್ಬರು ಸೇರಿದಂತೆ ರಾಜ್ಯದಲ್ಲಿ ಮೂವರು ಸಾವನ್ನಪ್ಪಿ ಐವರು ನಾಪತ್ತೆ ಆಗಿದ್ದಾರೆ. ಪ್ರಖ್ಯಾತ ಯಾತ್ರಾ ಸ್ಥಳಗಳಾದ ಬದರೀನಾಥ, ಕೇದಾರನಾಥ ಮತ್ತು ಗಂಗೋತ್ರಿಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲೂ ಭೂಕುಸಿತ ಸಂಭವಿಸಿದೆ. ಹೀಗಾಗಿ ಚಾರ್‌ಧಾಮ್ ಯಾತ್ರೆಯನ್ನು ಎರಡು ದಿನಗಳ ಮಟ್ಟಿಗೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.
ಈ ಬಾರಿಯೂ ಅದ್ಧೂರಿ ದಸರಾ ಉತ್ಸವ ಆಚರಣೆ: ಸಚಿವ ಮಹದೇವಪ್ಪ
ಜೊತೆಗೆ ಡೆಹ್ರಾಡೂನ್‌ನಲ್ಲಿ ಖಾಸಗಿ ರಕ್ಷಣಾ ತರಬೇತಿ ಅಕಾಡೆಮಿ ಕಟ್ಟಡ ಕೂಡ ಭೂಕುಸಿತಕ್ಕೆ ಧರಾಶಾಯಿಯಾಗಿದೆ. ಪೌರಿ ಜಿಲ್ಲೆಯಲ್ಲಿ 45 ಜನರು ನಾಪತ್ತೆಯಾಗಿದ್ದಾರೆ. ಹಲವು ನಗರಗಳಲ್ಲಿ ನದಿಗಳು ಉಕ್ಕೇರಿ ಹರಿದು ಜನವಸತಿ ಪ್ರದೇಶಗಳು ಮತ್ತು ಕಟ್ಟಡದೊಳಗೆ ಪ್ರವೇಶ ಮಾಡಿರುವ ಕಾರಣ ಜನರು ಜೀವ ಭಯ ಎದುರಿಸುವಂತಾಗಿದೆ. ಗಂಗಾ ನದಿ ತೆಹ್ರಿ, ಹರಿದ್ವಾರ ಮತ್ತು ಹೃಷಿಕೇಶದಲ್ಲಿ ಅಪಾಯಮಟ್ಟಮೀರಿ ಹರಿಯುತ್ತಿದೆ. ಇನ್ನು ಅಲಕನಂದಾ, ಮಂದಾಕಿನಿ ಮತ್ತು ಗಂಗಾ ನದಿಗಳು ರುದ್ರಪ್ರಯಾಗ, ಶ್ರೀನಗರ ಮತ್ತು ದೇವಪ್ರಯಾಗದಲ್ಲಿ ಅಪಾಯಮಟ್ಟ ಮೀರಿ ಹರಿಯುತ್ತಿವೆ.