ನವದೆಹಲಿ(ಫೆ.11): ಸಾಮಾನ್ಯ ಜನರಿಗೂ ಕೈಗೆಟಕುವ ದರದಲ್ಲಿ ಎ.ಸಿ. ರೈಲು ಪ್ರಯಾಣ ಕಲ್ಪಿಸಲು ರೈಲ್ವೆ ಇಲಾಖೆ ಇದೇ ಮೊದಲ ಬಾರಿಗೆ ತ್ರಿ ಟೈರ್‌ ಎಕಾನಮಿ ಎ.ಸಿ. ಬೋಗಿಗಳನ್ನು ಪರಿಚಯಿಸಿದ್ದು, ಅದರ ವಿನ್ಯಾಸವನ್ನು ಬಿಡುಗಡೆ ಮಾಡಲಾಗಿದೆ. ನಾನ್‌ ಎ.ಸಿ. ಸ್ಲೀಪರ್‌ ಬೋಗಿ ಹಾಗೂ ಎ.ಸಿ. ತ್ರಿ ಟೈರ್‌ ಎ.ಸಿ.ಯ ಮಧ್ಯದ ದರ್ಜೆಯ ರೈಲು ಬೋಗಿ ಇದಾಗಿರಲಿದ್ದು, ದರದಲ್ಲಿಯೂ ಅಗ್ಗವಾಗಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಪುರ್ತಲಾ ರೈಲ್‌ ಕೋಚ್‌ರ್‍ ಫ್ಯಾಕ್ಟರಿಯಲ್ಲಿ ಈ ಬೋಗಿಯನ್ನು ಸಿದ್ಧಪಡಿಸಲಾಗಿದೆ. ಈ ಬೋಗಿ 11 ಹೆಚ್ಚುವರಿ ಆಸನ ವ್ಯವಸ್ಥೆಯನ್ನು ಹೊಂದಿದೆ. ಮಾಮೂಲಿ ಸ್ಲೀಪರ್‌ ಕೋಚ್‌ನಲ್ಲಿ ಇರುತ್ತಿದ್ದ 72 ಆಸನದ ವ್ಯವಸ್ಥೆ ಇದ್ದರೆ, ಇಕೊನೊಮಿ ಎ.ಸಿ. ಕೋಚ್‌ 83 ಆಸನ ಸಾಮರ್ಥ್ಯವನ್ನು ಹೊಂದಿರಲಿದೆ. ಅಲ್ಲದೇ ಪ್ರತಿ ಸೀಟಿಗೂ ಎ.ಸಿ. ವೆಂಟ್‌ಗಳನ್ನು ನೀಡಲಾಗಿದ್ದು, ಅನುಕೂಲಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬಹುದಾಗಿದೆ.

ಎಲ್ಲಾ ಸೀಟಿಗೂ ಯುಎಸ್‌ಬಿ ಚಾರ್ಜಿಂಗ್‌ ಪಾಯಿಂಟ್‌ಗಳು, ಪುಸ್ತಕ ಓದಲು ಲೈಟಿಂಗ್‌ ಇನ್ನಿತರ ಆಧುನಿಕ ವ್ಯವಸ್ಥೆಗಳು ಇರಲಿವೆ. ಅಲ್ಲದೇ ಇದರಲ್ಲಿ ಅಗ್ನಿ ನಿರೋಧಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಮೇಲ್‌ ಮತ್ತು ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ಸ್ಲೀಪಿಂಗ್‌ ಕೋಚ್‌ಗಳ ಬದಲು ಇಕೊನೊಮಿ ಎಸಿ ಬೋಗಿಗಳನ್ನು ಅಳವಡಿಸುವ ಸಾಧ್ಯತೆ ಇದೆ.