ನವದೆಹಲಿ(ಜೂ.05)‌: ಕರ್ನಾಟಕದ ಬೆಳಗಾವಿಯಿಂದ ಉತ್ತರಪ್ರದೇಶದ ಗೋರಖ್‌ಪುರಕ್ಕೆ ವಲಸಿಗ ಕಾರ್ಮಿಕರನ್ನು ಹೊತ್ತು ಸಾಗುತ್ತಿದ್ದ ಶ್ರಮಿಕ ಸ್ಪೆಷಲ್‌ ರೈಲಿನ ಜತೆಜತೆಗೇ ಓಡಿ, ಹಸಿವು ತಾಳಲಾರದೆ ರಚ್ಚೆ ಹಿಡಿದ್ದ 4 ತಿಂಗಳ ಕಂದಮ್ಮವೊಂದಕ್ಕೆ ಹಾಲಿನ ಪ್ಯಾಕೆಟ್‌ ನೀಡುವ ಮೂಲಕ ಮಧ್ಯಪ್ರದೇಶದ ರೈಲ್ವೆ ರಕ್ಷಣಾ ದಳ (ಆರ್‌ಪಿಎಫ್‌)ದ ಪೇದೆಯೊಬ್ಬರು ಮಾನವೀಯತೆ ಮೆರೆದಿದ್ದಾರೆ.

ಪ್ರಾಣದ ಹಂಗು ತೊರೆದು ಹಸುಗೂಸಿನ ಹಸಿವು ನೀಗಿಸಿದ ಈ ಪೇದೆಯ ಕಾರ್ಯಕ್ಕೆ ಸ್ವತಃ ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಅವರೇ ಫಿದಾ ಆಗಿದ್ದು, ನಗದು ಬಹುಮಾನ ಘೋಷಿಸಿದ್ದಾರೆ. ರೈಲು ಹೊರಟು ಬಿಡುತ್ತೆ ಎಂಬ ಧಾವಂತದಲ್ಲಿ ಈ ಪೇದೆ ಶರವೇಗದಲ್ಲಿ ಓಡುವ ವಿಡಿಯೋ ಭಾರಿ ವೈರಲ್‌ ಆಗಿದೆ.

ಈ ಸಾಹಸ ಮಾಡಿದ ಪೇದೆ- ಇಂದರ್‌ ಸಿಂಗ್‌ ಯಾದವ್‌ (33). ಬೆಳಗಾವಿಯಿಂದ ಗೋರಖ್‌ಪುರಕ್ಕೆ ಹೊರಟಿದ್ದ ಶ್ರಮಿಕ್‌ ಸ್ಪೆಷಲ್‌ ರೈಲು ಮೇ 31ರಂದು ಬೆಳಗ್ಗೆ 8.30ಕ್ಕೆ ಭೋಪಾಲ್‌ ನಿಲ್ದಾಣಕ್ಕೆ ಬಂದಿತ್ತು. ಈ ವೇಳೆ ಯಾದವ್‌ರನ್ನು ಕಂಡ ಶರೀಫ್‌ ಹಾಶ್ಮಿ ಎಂಬ ಮಹಿಳೆಯೊಬ್ಬಳು, ತನ್ನ 4 ತಿಂಗಳ ಮಗುವಿಗೆ ಹಾಲು ಸಿಗುತ್ತಿಲ್ಲ. ಮಗು ಹಸಿವು ತಾಳದೇ ನಿರಂತರವಾಗಿ ಅಳುತ್ತಿದೆ. ಸಹಾಯ ಮಾಡಿ ಎಂದು ಬೇಡಿದ್ದಳು.

'ಸಿದ್ದರಾಮಯ್ಯ ಮೋಸ ಮಾಡಿದ್ದಕ್ಕೆ ನಾವು ಕಾಂಗ್ರೆಸ್‌ ಬಿಟ್ಟಿದ್ದು'

ತಡ ಮಾಡದೆ ಯಾದವ್‌ ಅವರು ನಿಲ್ದಾಣದಿಂದ ಹೊರಗೆ ಓಡಿ ಹೋಗಿ ಒಂದು ಪ್ಯಾಕೆಟ್‌ ಹಾಲು ಖರೀದಿಸಿದರು. ಅಷ್ಟರಲ್ಲಾಗಲೇ ರೈಲು ಹೊರಟಿತ್ತು. ತಕ್ಷಣವೇ ಯಾದವ್‌ ಅವರು ರೈಲಿನ ಜತೆಗೇ ಓಡಿ ಮಹಿಳೆಯ ಕೈಗೆ ಹಾಲಿನ ಪ್ಯಾಕೆಟ್‌ ತಲುಪಿಸಿದರು. ಅಪರಿಚಿತ ಪೇದೆಯ ಈ ಸಾಹಸ ಕಂಡು ಹಸುಗೂಸಿನ ತಾಯಿ ನಮಸ್ಕರಿಸಿ ಕೃತಜ್ಞತೆ ತೋರಿದಳು. ಈ ದೃಶ್ಯ ನೆರೆದಿದ್ದವರ ಹೃದಯ ಸ್ಪರ್ಶಿಸಿತು.