ನವದೆಹಲಿ[ನ.16]: 3ರಾಜಧಾನಿ, ತುರಂತ್‌ ಹಾಗೂ ಶತಾಬ್ದಿ ರೈಲುಗಳಲ್ಲಿನ ತಿಂಡಿ, ಊಟದ ದರವನ್ನು ಹೆಚ್ಚಿಸಲು ರೈಲ್ವೆ ಮಂಡಳಿ ನಿರ್ಧರಿಸಿದೆ. ಇದರಿಂದಾಗಿ ಪ್ರಯಾಣ ದರ ಕೂಡ ಏರಲಿದೆ.

ಈ ರೈಲುಗಳಲ್ಲಿನ ಫಸ್ಟ್‌ಕ್ಲಾಸ್‌ ಎಸಿ ಹಾಗೂ ಎಕ್ಸಿಕ್ಯೂಟಿವ್‌ ಕ್ಲಾಸ್‌ಗಳಲ್ಲಿ ಇನ್ನು ಮುಂದೆ ಚಹಾ ದರ 6 ರು. ಏರಿ 35 ರು. ಆಗಲಿದೆ. ತಿಂಡಿ ದರವನ್ನು 7 ರು.ನಷ್ಟುಏರಿಸಿ 140 ರು.ಗೆ ನಿಗದಿಪಡಿಸಲಾಗಿದೆ. ಇನ್ನು ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟದ ದರವನ್ನು 15 ರು.ನಷ್ಟುಹೆಚ್ಚಿಸಿ 245 ರು.ಗೆ ನಿಗದಿಪಡಿಸಲಾಗಿದೆ.

ಸೆಕೆಂಡ್‌ ಕ್ಲಾಸ್‌ ಎಸಿ ಹಾಗೂ ಚೇರ್‌ಕಾರ್‌ನಲ್ಲಿ ಚಹಾ ದರ 5 ರು.ನಷ್ಟುಏರಿ 20 ರು. ಆಗಲಿದೆ. ತಿಂಡಿ ದರವನ್ನು 8 ರು. ಏರಿಸಿ 105 ರು.ಗೆ ನಿಗದಿ ಮಾಡಲಾಗಿದೆ. ಹಾಗೆಯೇ ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟದ ದರವನ್ನು 10 ರು.ನಷ್ಟುಏರಿಸಿ 185 ರು.ಗೆ ಹೆಚ್ಚಿಸಲಾಗಿದೆ.

ಇದೇ ವೇಳೆ ಆಯಾ ಪ್ರಾದೇಶಿಕ ಕುರುಕಲು ತಿಂಡಿಗಳನ್ನು ರೈಲುಗಳಲ್ಲಿ ನೀಡಲಾಗುವುದು. ಇದು 350 ಗ್ರಾಂ ತೂಕದ್ದಾಗಿದ್ದು, 50 ರು. ದರ ನಿಗದಿಪಡಿಸಲಾಗಿದೆ.

ಈ ರೈಲುಗಳಲ್ಲಿನ ಪ್ರಯಾಣಿಕರಿಗೆ ತಿಂಡಿ-ಊಟದ ದರವನ್ನೂ ಟಿಕೆಟ್‌ನಲ್ಲಿ ಸೇರಿಸಲಾಗುತ್ತದೆ. ಹೀಗಾಗಿ ಪರೋಕ್ಷವಾಗಿ ಪ್ರಯಾಣ ದರ ಕೂಡ ಹೆಚ್ಚಿದಂತಾಗಿದೆ.