Asianet Suvarna News Asianet Suvarna News

ಗೋವಾಗೆ ರಾಹುಲ್‌, ದೀದಿ ‘ರಾಜಕೀಯ ಟೂರಿಸಂ’: ತೇಜಸ್ವಿ ವ್ಯಂಗ್ಯ!

* ಥಾಯ್ಲೆಂಡಲ್ಲಿ ನಿರ್ಬಂಧ ಇದೆ, ಹೀಗಾಗಿ ಗೋವಾಗೆ ರಾಹುಲ್‌: ಬಿಜೆಪಿ ನಾಯಕ

* ಗೋವಾಗೆ ರಾಹುಲ್‌, ದೀದಿ ‘ರಾಜಕೀಯ ಟೂರಿಸಂ’: ತೇಜಸ್ವಿ ವ್ಯಂಗ್ಯ

Rahul Gandhi vacationing in Goa as Thailand is shut Tejasvi Surya pod
Author
Bangalore, First Published Oct 31, 2021, 10:48 AM IST
  • Facebook
  • Twitter
  • Whatsapp

ಪಣಜಿ(ಅ.31): ಚುನಾವಣೆ ಇರುವುದರಿಂದ ಗೋವಾಕ್ಕೆ (Goa) ಭೇಟಿ ನೀಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Congress Leader Rahul gandhi) ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಅವರ ಭೇಟಿಯನ್ನು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ (Tejasvi Surya) ಇದೊಂದು ‘ರಾಜಕೀಯ ಟೂರಿಸಂ’ ಎಂದು ಟೀಕಿಸಿದ್ದಾರೆ.

‘ಕೋವಿಡ್‌ ಕಾರಣದಿಂದ ಥಾಯ್ಲೆಂಡ್‌ಗೆ (Thailand) ಪ್ರವಾಸಿಗರನ್ನು ನಿರ್ಬಂಧಿಸಲಾಗಿದೆ. ಗೋವಾ ರಾಜ್ಯವೂ ಸಹಾ ಥಾಯ್ಲೆಂಡ್‌ನಂತೆಯೇ ಇರುವ ಪ್ರವಾಸಿ ತಾಣ. ಹಾಗಾಗಿ ರಾಹುಲ್‌ ಗಾಂಧಿ (Rahul Gandhi) ಪ್ರವಾಸ ಕೈಗೊಂಡಿದ್ದಾರೆ. ಕೋವಿಡ್‌ನಿಂದಾಗಿ ಪ್ರವಾಸ ಕೈಗೊಳ್ಳಲಾಗದ ರಾಹುಲ್‌ ಅವರ ಕಷ್ಟ ನನಗೆ ಅರ್ಥವಾಗುತ್ತದೆ’ ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಅಣಕಿಸಿದರು.

‘ಮಮತಾ ಬ್ಯಾನರ್ಜಿ ಹಾಗೂ ಆಮ್‌ ಆದ್ಮಿ ಪಕ್ಷದ (Aam Admi Party) ನಾಯಕರೂ ಸಹ ಗೋವಾಗೆ ರಾಜಕೀಯ ಪ್ರವಾಸ ಕೈಗೊಂಡಿದ್ದಾರೆ. ಗೋವಾದಲ್ಲಿ ಆಡಳಿತದಲ್ಲಿರುವ ಬಿಜೆಪಿ ಉತ್ತಮ ಕೆಲಸಗಳನ್ನು ಮಾಡಿದೆ. ಜನರಿಗೆ ಬಿಜೆಪಿ ಮೇಲೆ ನಂಬಿಕೆ ಇದೆ. ಆದರೂ ರಾಜಕೀಯದ ನೆಪ ಇಟ್ಟುಕೊಂಡು ಇವರೆಲ್ಲರೂ ಪ್ರವಾಸ ಮಾಡುತ್ತಿದ್ದಾರೆ. ಅವರೆಲ್ಲರಿಗೂ ವಿರಾಮದ ದಿನಗಳ ಶುಭಾಶಯಗಳು’ ಎಂದು ತೇಜಸ್ವಿ ಕಿಚಾಯಿಸಿದರು.

ಕಾಂಗ್ರೆಸ್‌ನಿಂದಾಗಿ ಮೋದಿ ಬಲಶಾಲಿ: ದೀದಿ ಭವಿಷ್ಯ

 

ಇನ್ನೂ ಹಲವು ದಶಕಗಳ ಕಾಲ ದೇಶದಲ್ಲಿ ಬಿಜೆಪಿ ಭದ್ರವಾಗಿರುತ್ತದೆ ಎಂದು ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ ಹೇಳಿದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಮತ್ತಷ್ಟುಪ್ರಬಲವಾಗುತ್ತಾರೆ ಎಂದು ಅವರ ರಾಜಕೀಯ ವಿರೋಧಿಯಾಗಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭವಿಷ್ಯ ನುಡಿದಿದ್ದಾರೆ. ಇದಕ್ಕೆಲ್ಲಾ ಕಾಂಗ್ರೆಸ್‌ ಪಕ್ಷವೇ ಕಾರಣ ಎಂದು ಅವರು ಟೀಕಿಸಿದ್ದಾರೆ.

ಗೋವಾ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೂರು ದಿನಗಳ ಗೋವಾ ಪ್ರವಾಸ ಕೈಗೊಂಡಿದ್ದ ಅವರು ಕೊನೆಯ ದಿನವಾದ ಶನಿವಾರ ಸುದ್ದಿಗಾರರ ಜತೆ ಮಾತನಾಡಿದರು. ಕಾಂಗ್ರೆಸ್‌ ಪಕ್ಷ ರಾಜಕಾರಣದ ಬಗ್ಗೆ ಗಂಭೀರವಾಗಿಲ್ಲ. ಆ ಪುರಾತನ ಪಕ್ಷ ಯಾವುದೇ ನಿರ್ಧಾರಗಳನ್ನು ಕೈಗೊಳ್ಳುತ್ತಿಲ್ಲ. ಇದರಿಂದಾಗಿ ಮೋದಿ ಮತ್ತಷ್ಟುಬಲಶಾಲಿಯಾಗುತ್ತಾರೆ ಎಂದು ಹೇಳಿದರು.

ಕಾಂಗ್ರೆಸ್ಸಿಗೆ ಹಿಂದೆ ಅವಕಾಶ ಸಿಕ್ಕಿತ್ತು. ಬಿಜೆಪಿಯ ವಿರುದ್ಧ ಹೋರಾಡುವುದರ ಬದಲಿಗೆ ಆ ಪಕ್ಷ ನನ್ನ ರಾಜ್ಯದಲ್ಲಿ ನನ್ನ ವಿರುದ್ಧವೇ ಕಣಕ್ಕೆ ಇಳಿಯಿತು ಎಂದು ಹೇಳಿದರು. ಗೋವಾ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ 40 ಕ್ಷೇತ್ರಗಳಲ್ಲೂ ತೃಣಮೂಲ ಕಾಂಗ್ರೆಸ್‌ ಸ್ಪರ್ಧಿಸಲಿದೆ ಎಂದು ಘೋಷಿಸಿದರು.

ಇದೇ ವೇಳೆ, ಪ್ರಾದೇಶಿಕ ಪಕ್ಷಗಳು ಬಲಿಷ್ಠವಾಗಬೇಕು. ಒಕ್ಕೂಟ ವ್ಯವಸ್ಥೆ ಶಕ್ತಿಶಾಲಿಯಾಗಬೇಕು. ರಾಜ್ಯಗಳು ಬಲಿಷ್ಠವಾದರೆ ಕೇಂದ್ರ ಸರ್ಕಾರವೂ ಬಲಿಷ್ಠವಾಗಿರಲಿದೆ. ದೆಹಲಿಯ ದಾದಾಗಿರಿ ನಮಗೆ ಬೇಕಿಲ್ಲ. ಈವರೆಗೆ ಅನುಭವಿಸಿರುವುದೇ ಸಾಕು ಎಂದು ಹೇಳಿದರು.

ಬಿಜೆಪಿ ಶಕ್ತಿ ರಾಹುಲ್‌ಗೆ ಅರ್ಥವೇ ಆಗೋದಿಲ್ಲ: ಪ್ರಶಾಂತ್‌ ಕಿಶೋರ್‌!

ಬೆಲೆ ಏರಿಕೆ ಮತ್ತಿತರೆ ಕಾರಣದಿಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಜನತೆ ಅಧಿಕಾರದಿಂದ ಕೆಳಗಿಳಿಸಲಿದ್ದಾರೆ ಎಂದು ಪ್ರತಿಪಕ್ಷಗಳು ವಾದಿಸುತ್ತಿರುವಾಗಲೇ, ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ಕೇಂದ್ರ ಬಿಂದುವಾಗಿಯೇ ಮುಂದುವರಿಯಲಿದೆ. ಮುಂದಿನ ಹಲವು ದಶಕಗಳ ಕಾಲ ಆ ಪಕ್ಷ ಶಕ್ತಿಯುತವಾಗಿರುತ್ತದೆ ಎಂದು ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ ಭವಿಷ್ಯ ನುಡಿದಿರುವುದು ಸಂಚಲನಕ್ಕೆ ಕಾರಣವಾಗಿದೆ.

ಇದೇ ವೇಳೆ, ಮೋದಿ ಸರ್ಕಾರವನ್ನು ಜನರು ಸದ್ಯದಲ್ಲೇ ಕಿತ್ತೊಗೆಯಲಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅಂದುಕೊಂಡಿರಬಹುದು. ಆದರೆ ಆ ರೀತಿ ಆಗುವುದಿಲ್ಲ. ಇದುವೇ ರಾಹುಲ್‌ ಅವರಲ್ಲಿರುವ ಸಮಸ್ಯೆ ಎಂದು ವಿಶ್ಲೇಷಿಸಿದ್ದಾರೆ.

ತೃಣಮೂಲ ಕಾಂಗ್ರೆಸ್‌ ಪರ ಗೋವಾ ಚುನಾವಣೆಯಲ್ಲಿ ತಂತ್ರಗಾರರಾಗಿರುವ ಪ್ರಶಾಂತ್‌ ಕಿಶೋರ್‌ ಖಾಸಗಿ ಕಾರ್ಯಕ್ರಮವೊಂದರಲ್ಲಿ ಆಡಿದ ಮಾತುಗಳು ವೈರಲ್‌ ಆಗಿವೆ. ಅದರಲ್ಲಿ ಅವರು ‘ಗೆಲ್ಲಲಿ, ಸೋಲಲಿ ಬಿಜೆಪಿಯಂತೂ ರಾಷ್ಟ್ರ ರಾಜಕಾರಣದ ಕೇಂದ್ರ ಬಿಂದುವಾಗಿರಲಿದೆ. ಸ್ವಾತಂತ್ರ್ಯ ದೊರೆತ ಬಳಿಕ 40 ವರ್ಷಗಳ ಕಾಲ ಕಾಂಗ್ರೆಸ್‌ ಸ್ಥಿತಿ ಹೇಗಿತ್ತೋ ಹಾಗೆಯೇ. ಬಿಜೆಪಿ ಎಲ್ಲಿಗೂ ಹೋಗುವುದಿಲ್ಲ. ಭಾರತ ಮಟ್ಟದಲ್ಲಿ ಒಮ್ಮೆ ನೀವು ಶೇ.30ರಷ್ಟುಮತ ಪಡೆದ ಬಳಿಕ ಬೇಗನೆ ಎಲ್ಲಿಗೂ ಹೋಗುವುದಿಲ್ಲ. ಜನರು ಆಕ್ರೋಶಗೊಂಡಿದ್ದಾರೆ, ನರೇಂದ್ರ ಮೋದಿ ಅವರನ್ನು ಕಿತ್ತೊಗೆಯುತ್ತಾರೆ ಎಂಬ ಭ್ರಮೆಗೆ ಸಿಲುಕಬೇಡಿ’ ಎಂದು ಅವರು ಹೇಳಿದ್ದಾರೆ.

Follow Us:
Download App:
  • android
  • ios