ಚೆನ್ನೈ(ಜ.13): ಸಾಂಪ್ರದಾಯಿಕ ಗ್ರಾಮೀಣ ಕ್ರೀಡೆ ಜಲ್ಲಿಕಟ್ಟು ವೀಕ್ಷಣೆಗಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಜ.14ರ ಗುರುವಾರ ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ ದಿಢೀರ್‌ ಈ ಭೇಟಿ ನಿಗದಿಯಾಗಿದ್ದು, ಕುತೂಹಲ ಕೆರಳಿಸಿದೆ.

ಈ ಕುರಿತು ಮಾಹಿತಿ ನೀಡಿರುವ ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕೆ.ಎಸ್‌. ಅಳಗಿರಿ, ‘ಜ.14ರ ಬೆಳಗ್ಗೆ 11ಕ್ಕೆ ಮದುರೈಗೆ ಆಗಮಿಸಲಿರುವ ರಾಹುಲ್‌ ಗಾಂಧಿ, ಅವನಿಯಾಪುರಂನಲ್ಲಿ ಹೋರಿ ಮಣಿಸುವ ಸ್ಪರ್ಧೆ ಜಲ್ಲಿಕಟ್ಟು ವೀಕ್ಷಿಸಲಿದ್ದಾರೆ. ಈ ಮೂಲಕ ಕೇಂದ್ರ ಜಾರಿಗೆ ತಂದಿರುವ ವಿವಾದಾತ್ಮಕ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಅನ್ನದಾತರಿಗೆ ನೈತಿಕ ಬೆಂಬಲ ಸೂಚಿಸಲಿದ್ದಾರೆ.

ಈ ಭೇಟಿಯ ಹಿಂದೆ ಚುನಾವಣಾ ಪ್ರಚಾರದ ಉದ್ದೇಶವಿಲ್ಲ. ಗುರುವಾರದ ಭೇಟಿ ವೇಳೆ ರೈತರು ಸೇರಿದಂತೆ ಯಾವುದೇ ಮುಖಂಡರ ಜೊತೆ ರಾಜಕೀಯ ಚರ್ಚೆಗಳು ನಿಗದಿಯಾಗಿಲ್ಲ. ಜೊತೆಗೆ ಯುಪಿಎ ಕೂಟದ ಭಾಗವಾಗಿರುವ ಡಿಎಂಕೆ ಅಧ್ಯಕ್ಷ ಎಂ.ಕೆ ಸ್ಟಾಲಿನ್‌ ಸೇರಿದಂತೆ ಯಾವುದೇ ರಾಜಕೀಯ ಮುಖಂಡರನ್ನು ಅವರು ಭೇಟಿಯಾಗಲ್ಲ’ ಎಂದು ತಿಳಿಸಿದ್ದಾರೆ.