ಚೆನ್ನೈ(ಮಾ.02): ಕೇರಳದಲ್ಲಿ ಮೀನುಗಾರರ ಜೊತೆಗೆ ಸಮುದ್ರಕ್ಕೆ ಜಿಗಿದು ಈಜಿದ ನಂತರ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಇದೀಗ ತಮಿಳುನಾಡಿನಲ್ಲಿ ವಿದ್ಯಾರ್ಥಿಗಳ ಜೊತೆಗೆ ಪುಶ್‌ ಅಫ್ಸ್‌, ಕುಸ್ತಿ ಹಾಗೂ ಡ್ಯಾನ್ಸ್‌ ಮಾಡಿರುವುದು ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದೆ.

ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆಯ ಪ್ರಚಾರ ಕೈಗೊಂಡಿರುವ ರಾಹುಲ್‌, ಸೋಮವಾರ ಕನ್ಯಾಕುಮಾರಿ ಜಿಲ್ಲೆಯ ಮುಲಗುಮೂದು ಎಂಬ ಊರಿನ ಸೇಂಟ್‌ ಜೋಸೆಫ್‌ ಹೈಯರ್‌ ಸೆಕೆಂಡರಿ ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಿದರು. ಈ ವೇಳೆ ಹೈಸ್ಕೂಲ್‌ ವಿದ್ಯಾರ್ಥಿನಿಯೊಬ್ಬಳು ಅವರಿಗೆ ಪುಶ್‌ ಅಫ್ಸ್‌ ಸವಾಲು ಎಸೆದಳು. ಅದನ್ನು ನಗುತ್ತಾ ಸ್ವೀಕರಿಸಿದ ರಾಹುಲ್‌, ‘ನೀನು ನನಗೆ ಅವಮಾನ ಮಾಡಬೇಕು ಅಂತಿದೀಯಾ’ ಎಂದು ತಮಾಷೆಯಾಗಿ ಹೇಳುತ್ತಾ, ಮೈಕ್‌ ಅನ್ನು ಬೇರೆಯವರ ಕೈಗಿತ್ತು, ಆಕೆಯ ಜೊತೆಗೆ ಒಂದು ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ 15 ಪುಶ್‌ ಅಫ್ಸ್‌ ಹೊಡೆದರು. ನಂತರ ಇನ್ನೂ ಕಠಿಣವಾದ ‘ಒಂದು ಕೈ ಪುಶ್‌ ಅಪ್‌’ ಕೂಡ ಹೊಡೆದು ಭೇಷ್‌ ಅನ್ನಿಸಿಕೊಂಡರು.

 
 
 
 
 
 
 
 
 
 
 
 
 
 
 

A post shared by Rahul Gandhi (@rahulgandhi)

ಇದೇ ವೇಳೆ ರಾಹುಲ್‌ ಜಪಾನೀಸ್‌ ಮಾರ್ಷಲ್‌ ಆಟ್ಸ್‌ರ್‍ ‘ಐಕಿಡೋ’ ಪಟ್ಟು ಕೂಡ ಪ್ರದರ್ಶಿಸಿ ವಿದ್ಯಾರ್ಥಿಗಳ ಜೊತೆಗೆ ಮೋಜಿನ ಕುಸ್ತಿ ಆಡಿದರು. ನಂತರ ವೇದಿಕೆಯ ಮೇಲೆ ವಿದ್ಯಾರ್ಥಿನಿಯರು ಹಾಗೂ ತಮಿಳುನಾಡಿನ ಚುನಾವಣಾ ಉಸ್ತುವಾರಿ ದಿನೇಶ್‌ ಗುಂಡೂರಾವ್‌ ಅವರ ಜೊತೆಗೆ ಕೈ-ಕೈ ಹಿಡಿದು ತಮಿಳು ಹಾಡೊಂದಕ್ಕೆ ಹೆಜ್ಜೆ ಹಾಕಿದರು. ಈ ಎಲ್ಲಾ ವಿಡಿಯೋ ತುಣುಕುಗಳು ಇಂಟರ್ನೆಟ್‌ನಲ್ಲಿ ವೈರಲ್‌ ಆಗಿವೆ.

ಇತ್ತೀಚೆಗೆ ಕೇರಳದಲ್ಲಿ ರಾಹುಲ್‌ ಸಮುದ್ರದಲ್ಲಿ ಮೀನುಗಾರರ ಜೊತೆಗೆ ಈಜಾಡಿದ ನಂತರ ಒದ್ದೆ ಬಟ್ಟೆಯಲ್ಲಿ ಅವರ ಮೈಕಟ್ಟಿನಲ್ಲಿ ‘ಸಿಕ್ಸ್‌ ಪ್ಯಾಕ್‌’ ಕಾಣಿಸುತ್ತಿತ್ತು. ಅದು ಕೂಡ ನೆಟ್ಟಿಗರಿಂದ ಮೆಚ್ಚುಗೆಗೆ ಪಾತ್ರವಾಗಿತ್ತು.

ರಾಹುಲ್‌ ಪ್ರಚಾರ ಶೈಲಿ ಬದಲು?

ಕೆಲ ದಿನಗಳಿಂದ ರಾಹುಲ್‌ ಗಾಂಧಿ ಕೇರಳ, ತಮಿಳುನಾಡು ಮುಂತಾದ ರಾಜ್ಯಗಳಲ್ಲಿ ನಿರಂತರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ, ಅಲ್ಲೆಲ್ಲ ಸಾಂಪ್ರದಾಯಿಕ ರೋಡ್‌ ರಾರ‍ಯಲಿ, ವೇದಿಕೆಯ ಮೇಲಿನ ಭಾಷಣ, ಕಾಲ್ನಡಿಗೆಯ ಜಾಥಾಗಳಿಗಿಂತ ಹೆಚ್ಚಾಗಿ ಯುವಜನರು ಹಾಗೂ ವಿವಿಧ ಸಮುದಾಯಗಳ ಜೊತೆಗೆ ನೇರವಾಗಿ ಬೆರೆಯುವ ಮೂಲಕ ವಿಭಿನ್ನ ರೀತಿಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಈ ಮೂಲಕ ತಳಮಟ್ಟದಲ್ಲಿ ಜನರನ್ನು ಆಪ್ತವಾಗಿ ತಲುಪಲು ಯತ್ನಿಸುತ್ತಿದ್ದಾರೆಂದು ಹೇಳಲಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ಕೆಲ ದಿನಗಳ ಹಿಂದೆ ಸ್ವತಃ ಅಡುಗೆ ಮಾಡಿ ಊಟ ಮಾಡಿದ್ದರು, ರಸ್ತೆ ಬದಿ ಹೋಟೆಲ್‌ಗೆ ತೆರಳಿ ಚಹಾ ಸೇವಿಸಿದ್ದರು, ಮೀನು ಹಿಡಿದು, ಸಮುದ್ರದಲ್ಲಿ ಈಜಿ ಗಮನ ಸೆಳೆದಿದ್ದರು.