ರಾಹುಲ್ ಗಾಂಧಿ ಕೇರಳ ಕಾಂಗ್ರೆಸ್ ಒಗ್ಗಟ್ಟಿನ ಬಗ್ಗೆ ಮಾತನಾಡಿದ್ದು, ಎಲ್ಲರೂ ಒಂದೇ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ. ಶಶಿ ತರೂರ್ ಅವರ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ತಿರುವನಂತಪುರ: ‘ಕೇರಳದ ಕಾಂಗ್ರೆಸ್ ಒಂದಾಗಿ ನಿಂತಿದ್ದು, ನಾವೆಲ್ಲಾ ಒಂದೇ ಉದ್ದೇಶವನ್ನು ಸಾಧಿಸುವ ನಿಟ್ಟಿನಲ್ಲಿ ಒಗ್ಗಟ್ಟಾಗಿದ್ದೇವೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಈ ಮೂಲಕ, ‘ಕೇರಳ ಕಾಂಗ್ರೆಸ್ ಘಟಕ ಒಡೆದ ಮನೆಯಾಗಿದೆ. ಅದನ್ನು ಯಾರೂ ಸರಿ ಮಾಡಲು ಪ್ರಯತ್ನಿಸುತ್ತಿಲ್ಲ. ಪಕ್ಷಕ್ಕೆ ನಾನು ಬೇಡ ಎಂದರೆ ನನಗೆ ಬೇರೆ ಬೇರೆ ಅವಕಾಶಗಳಿವೆ’ ಎಂದು ಇತ್ತೀಚೆಗೆ ಹೇಳಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಶಶಿ ತರೂರ್‌ಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಕೇರಳ ವಿಧಾನಸಭೆ ಚುನಾವಣೆಗೆ ಪೂರಕವಾಗಿ ಇಲ್ಲಿನ ಇಂದಿರಾ ಭವನದಲ್ಲಿ, ಶಿಸ್ತು, ಒಗ್ಗಟ್ಟು, ರಾಜ್ಯ ಸಂಘಟನೆಯ ಬಲವರ್ಧನೆಯನ್ನು ಧ್ಯೇಯವಾಗಿಟ್ಟುಕೊಂಡು ಸಭೆ ನಡೆಸಲಾಗಿತ್ತು. ಈ ವೇಳೆ ರಾಜಕೀಯ ತಂತ್ರಗಳ ಬಗ್ಗೆ ಎಚ್ಚರಿಕೆಯಿಂದಿದ್ದು, ಪಕ್ಷಕ್ಕೆ ವಿರುದ್ಧವಾಗಿ ಏನನ್ನೂ ಹೇಳಬಾರದು ಅಥವಾ ಮಾಡಬಾರದು ಎಂದು ರಾಹುಲ್ ಸೂಚಿಸಿದ್ದಾರೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕೆ. ಸುಧಾಕರನ್, ತಿರುವನಂತಪುರಂ ಸಂಸದ ಶಶಿ ತರೂರ್ ಸೇರಿ ಹಲವು ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು. ಬಳಿಕ ಫೇಸ್‌ಬುಕ್‌ನಲ್ಲಿ ‘ಟೀಂ ಕೇರಳ’ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಕೆಲ ನಾಯಕರ ಹೇಳಿಕೆಗಳನ್ನು ಪೋಸ್ಟ್ ಮಾಡಿರುವ ರಾಹುಲ್, ಒಗ್ಗಟ್ಟು ಪ್ರದರ್ಶನ ಮಾಡಿ ತರೂರ್ ಅವರಿಗೆ ತಿರುಗೇಟು ನೀಡಿದ್ದಾರೆ.
