ನವದೆಹಲಿ(ಡಿ.20): ಹೊಸ ವರ್ಷದಲ್ಲಿ ಕಾಂಗ್ರೆಸ್ಸಿಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲು ಪ್ರಕ್ರಿಯೆಗಳು ಆರಂಭವಾಗಿರುವಾಗಲೇ, ‘ಪಕ್ಷಕ್ಕಾಗಿ ಎಲ್ಲರೂ ಬಯಸಿದಂತೆ ದುಡಿಯಲು ಸಿದ್ಧ’ ಎಂದು ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿರುವುದು ಸಂಚಲನಕ್ಕೆ ಕಾರಣವಾಗಿದೆ. ಮತ್ತೊಮ್ಮೆ ಅಧ್ಯಕ್ಷರಾಗಲು ಹಿಂಜರಿಯುತ್ತಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ರಾಹುಲ್‌ ಅವರು ಸೂಚ್ಯವಾಗಿ ಆಡಿರುವ ಈ ಮಾತುಗಳು ಅವರು ಕಾಂಗ್ರೆಸ್ಸಿನ ಗದ್ದುಗೆಗೇರಲು ಸಿದ್ಧವಾಗಿರುವ ದ್ಯೋತಕ ಎಂದು ವಿಶ್ಲೇಷಿಸಲಾಗುತ್ತಿದೆ.

ಸಿದ್ದರಾಮಯ್ಯನ ಸೋಲಿಸಬೇಕೆಂದು ಒಳ ಒಪ್ಪಂದವಾಗಿತ್ತು: ಜೆಡಿಎಸ್ ಶಾಸಕ ಬಾಂಬ್

ಕಳೆದ ಆಗಸ್ಟ್‌ನಲ್ಲಿ ಪಕ್ಷದ ನಾಯಕತ್ವದ ವಿರುದ್ಧವೇ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದ 23 ನಾಯಕರ ಗುಂಪಿನ ಪೈಕಿ ಪ್ರಮುಖರ ಜತೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಪುತ್ರಿ ಪ್ರಿಯಾಂಕಾ ಗಾಂಧಿ, ಪುತ್ರ ರಾಹುಲ್‌ ಅವರು ಇದೇ ಮೊದಲ ಬಾರಿಗೆ ಸಭೆ ನಡೆಸಿದರು. ಪಕ್ಷಕ್ಕಾಗಿ ದುಡಿಯಲು ಸಿದ್ಧರಿರುವುದಾಗಿ ಸಭೆಯಲ್ಲಿ ರಾಹುಲ್‌ ಹೇಳಿದರು ಎಂದು ಹಿರಿಯ ನಾಯಕ ಪವನ್‌ ಬನ್ಸಲ್‌ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು. ಪಕ್ಷ ಬೂತ್‌ ಮಟ್ಟದಲ್ಲೇ ಸಂಘಟನೆಗೊಳ್ಳಬೇಕು, ಉತ್ತಮ ಸಂವಹನ ಇರಬೇಕು ಎಂದು ರಾಹುಲ್‌ ಹೇಳಿದರು ಎಂದು ಬನ್ಸಲ್‌ ತಿಳಿಸಿದರು.

ಈ ನಡುವೆ, ಸಭೆಯ ಒಂದು ಹಂತದಲ್ಲಿ ಹರೀಶ್‌ ರಾವತ್‌, ಎ.ಕೆ. ಆ್ಯಂಟನಿ ಅವರಂತಹ ಹಿರಿಯ ನಾಯಕರು ಶೀಘ್ರದಲ್ಲೇ ರಾಹುಲ್‌ ಅವರು ಪಕ್ಷದ ಹೊಣೆ ಹೊತ್ತುಕೊಳ್ಳಬೇಕು ಎಂದು ಸಲಹೆ ಮಾಡಿದರು ಎನ್ನಲಾಗಿದೆ. ‘ಪಕ್ಷದ ಮುಂದಿನ ಅಧ್ಯಕ್ಷರು ಯಾರಾಗಬೇಕು ಎಂಬ ಬಗ್ಗೆ ಈ ಸಭೆಯನ್ನು ಕರೆಯಲಾಗಿಲ್ಲ. ಸಂಘಟನೆ ದೃಷ್ಟಿಯಿಂದ ಸಭೆ ನಡೆಸಲಾಗಿದೆ. ಅದರ ಬಗ್ಗೆ ಗಮನಹರಿಸೋಣ’ ಎಂದು ರಾಹುಲ್‌ ಹೇಳಿದರು ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಬಂಡಾಯ ನಾಯಕರೂ ಸಹಮತ ವ್ಯಕ್ತಪಡಿಸಿದರು ಎನ್ನಲಾಗಿದೆ.

ಸೋನಿಯಾ ಸಭೆ ದಿನವೇ ಕಾಂಗ್ರೆಸ್‌ಗೆ ಶಾಕ್; ಪಕ್ಷದ ಪ್ರಮುಖ ನಾಯಕಿ ರಾಜೀನಾಮೆ!

ಮತ್ತೊಂದೆಡೆ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದ ರಾಹುಲ್‌, ಅನುಭವ ಆಧರಿಸಿ ಹಿರಿಯ ನಾಯಕರನ್ನು ನಾನು ಗೌರವಿಸುತ್ತಿಲ್ಲ. ಬದಲಿಗೆ ಎಲ್ಲರೂ ನನ್ನ ತಂದೆ ರಾಜೀವ್‌ ಗಾಂಧಿಯವರ ಸಹೋದ್ಯೋಗಿಗಳು ಎಂಬ ಕಾರಣಕ್ಕೆ ವಿಶೇಷ ಗೌರವವಿದೆ ಎಂದು ತಿಳಿಸಿದರು ಎನ್ನಲಾಗಿದೆ. ತನ್ಮೂಲಕ ಹಿರಿಯ- ಕಿರಿಯ ಸಂಘರ್ಷಕ್ಕೆ ತೆರೆ ಎಳೆಯಲು ಯತ್ನಿಸಿದರು ಎಂದು ಹೇಳಲಾಗಿದೆ.

ಪತ್ರ ಬರೆದಿದ್ದ ನಾಯಕರ ಪೈಕಿ ಗುಲಾಂ ನಬಿ ಆಜಾದ್‌, ಶಶಿ ತರೂರ್‌, ಆನಂದ ಶರ್ಮಾ ಮತ್ತಿತರರು ಮಾತನಾಡಿ, ನಾವು ಬಂಡಾಯಗಾರರೂ ಅಲ್ಲ, ಅತೃಪ್ತರೂ ಅಲ್ಲ. ಪಕ್ಷವನ್ನು ಬಲಯುತಗೊಳಿಸುವ ಉದ್ದೇಶದಿಂದ ವಿಷಯಗಳನ್ನು ಪ್ರಸ್ತಾಪಿಸಿದ್ದೇವೆ ಎಂದು ತಿಳಿಸಿದರು. ‘ನಾವೆಲ್ಲರೂ ಒಂದು ದೊಡ್ಡ ಕುಟುಂಬ ಇದ್ದಂತೆ. ಪಕ್ಷಕ್ಕೆ ಶಕ್ತಿ ತುಂಬಲು ಕೆಲಸ ಮಾಡೋಣ. ಕಾಂಗ್ರೆಸ್ಸಿನಲ್ಲಿ ಬಂಡಾಯವಿಲ್ಲ. ಪಕ್ಷಕ್ಕೆ ಚೈತನ್ಯ ತುಂಬುವ ಸಲುವಾಗಿ ಒಗ್ಗೂಡಿ ಕೆಲಸ ಮಾಡಲು ಎಲ್ಲರೂ ಸಿದ್ಧರಿದ್ದಾರೆ’ ಎಂದು ಸೋನಿಯಾ ತಿಳಿಸಿದರು ಎಂದು ವರದಿಗಳು ಹೇಳಿವೆ.