ವಯ​ನಾ​ಡ್(ಫೆ.23)‌: ಕೇಂದ್ರದ ಕೃಷಿ ಕಾಯ್ದೆ​ಗಳ ವಿರುದ್ಧ ಕಾಂಗ್ರೆಸ್‌ ನಾಯ​ಕ ರಾಹುಲ್‌ ಗಾಂಧಿ ಅವರು ತಮ್ಮ ಲೋಕ​ಸಭಾ ಕ್ಷೇತ್ರ ಕೇರ​ಳದ ವಯ​ನಾ​ಡಿ​ನಲ್ಲಿ ರೈತ​ರೊಂದಿಗೆ ಟ್ರ್ಯಾಕ್ಟರ್‌ ರಾರ‍ಯಲಿ ನಡೆ​ಸಿ​ದ​ರು. ವಿಧಾ​ನ​ಸಭೆ ಚುನಾ​ವಣೆ ಹಿನ್ನೆ​ಲೆ​ಯಲ್ಲಿ 2 ದಿನ​ಗಳ ಪ್ರವಾ​ಸ​ಕ್ಕಾಗಿ ಕ್ಷೇತ್ರಕ್ಕೆ ಬಂದಿ​ರುವ ರಾಹುಲ್‌ ಅವರು 6 ಕಿ. ಮೀ ದೂರದ ರಾರ‍ಯಲಿ ವೇಳೆ ತಾವೇ ಟ್ರ್ಯಾಕ್ಟರ್‌ ಅನ್ನು ಚಾಲನೆ ಮಾಡಿದ್ದು ಗಮನ ಸೆಳೆ​ಯಿತು.

ಬಳಿಕ ಮೋದಿ ಸರ್ಕಾ​ರದ ವಿರುದ್ಧ ವಾಗ್ದಾಳಿ ನಡೆ​ಸಿದ ರಾಹುಲ್‌, ‘ಈ ದೇಶದ ಕೃಷಿ ವಲ​ಯವು ಭಾರತ ಮಾತೆಗೆ ಸೇರಿ​ದ್ದಾ​ಗಿದ್ದು, ನೂತನ 3 ಕಾಯ್ದೆ​ಗ​ಳ ಹಿಂಪ​ಡೆ​ತ​ಕ್ಕಾಗಿ ಕೇಂದ್ರ ಸರ್ಕಾ​ರಕ್ಕೆ ಜನ ಸಾಮಾ​ನ್ಯರು ಒತ್ತಾ​ಯಿ​ಸ​ಬೇ​ಕು’ ಎಂದು ಕರೆ ನೀಡಿ​ದರು.

2014ರಲ್ಲಿ ಪ್ರಧಾನಿ ಪಟ್ಟ​ಕ್ಕೇ​ರಿದ ಮೋದಿ ಗ್ರಾಮೀಣ ಜನ​ತೆಗೆ ಉದ್ಯೋಗ ಕಲ್ಪಿ​ಸಲು ಯುಪಿಎ ಸರ್ಕಾರ ಜಾರಿಗೆ ತಂದಿದ್ದ ನರೇಗಾ ಯೋಜ​ನೆ​ ಟೀಕಿ​ಸಿ​ದ್ದರು. ಆದರೆ ಕೊರೋನಾ ಅವ​ಧಿ​ಯಲ್ಲಿ ನರೇಗಾ ಯೋಜ​ನೆಯ ಮಹ​ತ್ವ​ವನ್ನು ಮೋದಿ ಅವರು ಮನ​ಗಂಡರು. ಭಾರ​ತದ ರೈತರ ಸಂಕ​ಷ್ಟ​ಗ​ಳ ಕುರಿ​ತಾಗಿ ಪಾಪ್‌ ಗಾಯ​ಕಿ​(ರಿಹಾ​ನಾ) ಸೇರಿ​ದಂತೆ ಇಡೀ ವಿಶ್ವಕ್ಕೆ ಅರ್ಥವಾ​ಗಿದೆ. ಆದರೆ ದಿಲ್ಲಿ​ಯ​ಲ್ಲಿ​ರುವ ನಮ್ಮ ಸರ್ಕಾ​ರಕ್ಕೆ ಈ ಬಗ್ಗೆ ಕಾಳ​ಜಿಯೇ ಇಲ್ಲ ಎಂದು ಕಿಡಿ​ಕಾ​ರಿ​ದರು.