ನವದೆಹಲಿ(ಮೇ.17): ಲಾಕ್‌ಡೌನ್‌ ಹಿನ್ನೆಲೆ ತಿಂಗಳಾನುಗಟ್ಟಲೇ ದೇಶದ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿದದದದ ವಲಸೆ ಕಾರ್ಮಿಕರು ತಮ್ಮೂರಿನತ್ತ ಮುಖ ಮಾಡಿದ್ದಾರೆ. ಹೀಗಿರವಾಗ ರಾಷ್ಟ್ರ ರಾಜಧಾನಿ ದೆಹಲಿಯಿಂದಲೂ ಕಾರ್ಮಿಕರು ತಮ್ಮ ಮನೆಗಳತ್ತ ಪಯಣ ಆರಂಭಿಸಿದ್ದಾರೆ. ಈಗಾಗಲೇ ಅನೇಕ ಮಂದಿ ತಮ್ಮ ಮನೆ ಸೇರಿಕೊಂಡಿದ್ದು, ಅದಕ್ಕೂ ಹೆಚ್ಚಿನ ಮಂದಿ ತಮ್ಮೂರಿಗೆ ಹೋಗುವ ಹಾದಿಯಲ್ಲಿದ್ದಾರೆ. ಸಂಚಾರ ವ್ಯವಸ್ಥೆ ಇಲ್ಲದೇ ಅನೇಕ ಮಂದಿ ಕಾಲ್ನಡಿಗೆಯಲ್ಲೇ ಪ್ರಯಾಣ ಆರಂಭಿಸಿದ್ದಾರೆ. ಹೀಗಿರುವಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮೂರಿಗೆ ತೆರಳಲು ಸಜ್ಜಾಗಿ ಫುಟ್‌ಪಾತ್‌ ಮೇಲೆ ಕುಳಿತು ಕಾಯುತ್ತಿದ್ದ ವಲಸೆ ಕಾರ್ಮಿಕರನ್ನು ಭೇಟಿಯಾಗಿ ಅವರೊಂದಿಗೆ ಕುಳಿತು ಮಾತುಕತೆ ನಡೆಸಿದ್ದಾರೆ.

ದೆಹಲಿಯ ಸುಖದೇವ್ ವಿಹಾರ್ ಮೇಲ್ಸೇತುವೆ ಬಳಿ ಇದ್ದ ವಲಸೆ ಕಾರ್ಮಿಕರನ್ನು ಶನಿವಾರ ಭೇಟಿಯಾದ ರಾಹುಲ್ ಗಾಂಧಿ ವಲಸಿಗರ ಕಷ್ಟಗಳನ್ನು ಶಾಂತಚಿತ್ತರಾಗಿ ಆಲಿಸಿದ್ದಾರೆ. ಈ ವೇಳೆ ತವರಿಗೆ ತೆರಳಲು ಅಗತ್ಯವಿರುವ ಅನುಕೂಲ ಮಾಡಿಕೊಡುವುದಾಗಿ ತಿಳಿಸಿದರು. ರಾಹುಲ್ ಗಾಂಧಿ ಬಿಳಿ ಕುರ್ತಾ, ಕಪ್ಪು ಪ್ಯಾಂಟ್ ಧರಿಸಿ ಫುಟ್​ಪಾಥ್ ಮೇಲೆ ಕೂತು ಕಾರ್ಮಿಕರ ಜೊತೆ ಸಂವಾದ ನಡೆಸಿರುವ ಫೋಟೋಗಳು ಸದ್ಯ ಭಾರೀ ವೈರಲ್ ಆಗಿವೆ.

ಆದರೀಗ ರಾಹುಲ್ ಗಾಂಧಿ ಜೊತೆ ಮಾತನಾಡಿದ್ದ ವಲಸೆ ಕಾರ್ಮಿಕರನ್ನು ಪೊಲೀಸರು ಹಿರಿಯ ಅಧಿಕಾರಿಗಳ ಆದೇಶದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಹೀಗಿದ್ದರೂ ಪೊಲೀಸರು ಈ ಬಗ್ಗೆ ಮಾಧ್ಯಮಗಳಿಗೆ ಇನ್ನೂ ಯಾವುದೇ ಸ್ಪಷ್ಟನೆ ನೀಡಿಲ್ಲ. ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ 20 ಮಂದಿಯ ಜತೆ ಒಂದು ತಾಸು ರಾಹುಲ್ ಗಾಂಧಿ ಮಾತುಕತೆ ನಡೆಸಿದರು.