ಅಮೆರಿಕ ಪ್ರವಾಸದ ವೇಳೆ ಭಾರತದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡಿ ವಿವಾದ ಸೃಷ್ಟಿಸಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ಭಾರತ ವಿರೋಧಿ ಅಮೆರಿಕ ಸಂಸದೆ ಇಲ್ಹಾನ್‌ ಒಮರ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದು ಬಿಜೆಪಿ ಕೆಂಗಣ್ಣಿಗೆ ಕಾರಣವಾಗಿದೆ.

ವಾಷಿಂಗ್ಟನ್‌/ನವದೆಹಲಿ: ಅಮೆರಿಕ ಪ್ರವಾಸದ ವೇಳೆ ಭಾರತದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡಿ ವಿವಾದ ಸೃಷ್ಟಿಸಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ಭಾರತ ವಿರೋಧಿ ಅಮೆರಿಕ ಸಂಸದೆ ಇಲ್ಹಾನ್‌ ಒಮರ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದು ಬಿಜೆಪಿ ಕೆಂಗಣ್ಣಿಗೆ ಕಾರಣವಾಗಿದೆ.

‘ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಇಲ್ಲ’ ಎಂದು ಸೋಮವಾರ ರಾಹುಲ್‌ ನೀಡಿದ್ದ ಹೇಳಿಕೆಯನ್ನು ಕೆಲ ಸಮಯದ ಹಿಂದೆ ಇದೇ ಇಲ್ಹಾನ್‌ ಕೂಡ ನೀಡಿದ್ದರು ಎಂಬುದು ವಿಶೇಷ. ಸದಾ ಭಾರತ ವಿರೋಧಿ ನಡೆಗಳಿಂದ ಸುದ್ದಿಯಲ್ಲಿರುವ ಇಲ್ಹಾನ್‌ ಅವರನ್ನು ಇದುವರೆಗೆ ಭಾರತದ ರಾಜಕಾರಣಿಗಳು ಭೇಟಿಯಾಗಿರಲಿಲ್ಲ. ಆದರೆ ಮಂಗಳವಾರ ಇತರೆ ಕೆಲವು ಸಂಸದರ ಜೊತೆಗೆ ಇಲ್ಹಾನ್ ಅವರನ್ನು ರಾಹುಲ್‌ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಪ್ರಧಾನಿ ಮೋದಿಯನ್ನು ಮಾನಸಿಕವಾಗಿ ಸೋಲಿಸಿದ್ದೇವೆ: ರಾಹುಲ್ ಗಾಂಧಿ

ಬಿಜೆಪಿ ಆಕ್ಷೇಪ:

ಇದಕ್ಕೆ ಆಕ್ಷೇಪಿಸಿರುವ ರಾಜ್ಯಸಭಾ ಸಂಸದ ಮತ್ತು ಬಿಜೆಪಿ ವಕ್ತಾರ ಸುಧಾನ್ಷು ತ್ರಿವೇದಿ, ‘ಭಾರತದ ವಿರುದ್ಧ ವಿಷಕಾರುವುದರ ಮೂಲಕವೇ ಗುರುತಿಸಿಕೊಂಡಿರುವ ರಾಹುಲ್‌ರ ಹೊಸ ನಡೆ ಮತ್ತಷ್ಟು ಕಳವಳಕಾರಿ. ಇದೇ ಮೊದಲ ಬಾರಿಗೆ ಭಾರತದ ವಿಪಕ್ಷ ನಾಯಕರೊಬ್ಬರು, ಭಾರತ ವಿರೋಧಿ ಅಮೆರಿಕ ಸಂಸದೆ ಇಲ್ಹಾನ್‌ ಅವರನ್ನು ಭೇಟಿಯಾಗಿದ್ದಾರೆ. ರಾಹುಲ್ ಕೇವಲ ಬಾಲಿಶವಾಗಿ ವರ್ತಿಸುತ್ತಿಲ್ಲ, ಬದಲಾಗಿ ಅಪಾಯಕಾರಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಅವರ ನಡೆಗಳು ಭಾರತ ವಿರೋಧಿಗಳು ಖುಷಿಪಡುವಂತಿದೆ’ ಎಂದು ಕಿಡಿಕಾರಿದ್ದಾರೆ.

ಮತ್ತೊಂದೆಡೆ ‘ರಾಹುಲ್‌ ಇಲ್ಹಾನ್‌ ಅವರನ್ನು ಭೇಟಿ ಮಾಡಿದ್ದಾದರೂ ಏಕೆ? ಬಿಜೆಪಿಯನ್ನು ವಿರೋಧಿಸುವ ಭರದಲ್ಲಿ ದೇಶವನ್ನು ಏಕೆ ವಿರೋಧಿಸುತ್ತೀರಿ?’ ಎಂದು ಮತ್ತೊಬ್ಬ ವಕ್ತಾರ ಶೆಹಜಾದ್‌ ಪೂನಾವಾಲಾ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ತಿರುಗೇಟು:

ಇಲ್ಹಾನ್‌ ಒಮರ್‌ ಜೊತೆ ರಾಹುಲ್‌ ಭೇಟಿಗೆ ಬಿಜೆಪಿ ಆಕ್ಷೇಪಿಸಿದ್ದಕ್ಕೆ ಕಿಡಿಕಾರಿರುವ ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ, ‘ಬೇಕಿದ್ದರೆ ಕೇಂದ್ರ ಸರ್ಕಾರ ಅಮೆರಿಕದ ರಾಯಭಾರಿಯನ್ನು ಕರೆಸಿ ಸೂಕ್ತ ಕ್ರಮ ಕೈಗೊಳ್ಳಲಿ. ಆಗ ನಾವು ಪ್ರಧಾನಿ ಹಾಗೂ ಗೃಹ ಸಚಿವರಿಬ್ಬರ ಬಣ್ಣವನ್ನೂ ಬಯಲು ಮಾಡುತ್ತೇವೆ’ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಅವರ ತಂದೆ ರಾಜೀವ್ ಗಾಂಧಿಗಿಂತ ಹೆಚ್ಚು ಬುದ್ಧಿವಂತ: ಸ್ಯಾಮ್ ಪಿತ್ರೋಡಾ 

ಯಾರು ಈ ಇಲ್ಹಾನ್‌?:

ಇಲ್ಹಾನ್‌ ಅವರು ಅಮೆರಿಕ ಸಂಸತ್‌ಗೆ ಆಯ್ಕೆಯಾದ ಮೊದಲ ಆಫ್ರಿಕನ್‌ ವಲಸಿಗಳು ಎಂಬ ದಾಖಲೆ ಹೊಂದಿದ್ದಾರೆ. ಕೆಲ ಸಮಯದ ಹಿಂದೆ ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡಿ ಪಾಕ್‌ ಪರ ನಿಲುವು ವ್ಯಕ್ತಪಡಿಸಿದ್ದರು. ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹರಣವಾಗುತ್ತಿದೆ ಎಂದು ಅಮೆರಿಕದ ಸಂಸತ್‌ನಲ್ಲಿ ನಿಲುವಳಿ ಮಂಡಿಸಿದ್ದರು. ಇಸ್ರೇಲ್‌ಗೆ ಅಮೆರಿಕದ ಶಸ್ತ್ರಾಸ್ತ್ರ ಪೂರೈಕೆಯನ್ನು ಬಲವಾಗಿ ಖಂಡಿಸಿದ್ದರು.