ಹರ್ಯಾಣಿ ಸಾಂಗ್‌ಗೆ ಡಾನ್ಸ್ ಮಾಡಿದ ಸೋನಿಯಾ ಗಾಂಧಿ, ವಿಡಿಯೋ ವೈರಲ್!
ಕೆಲ ದಿನಗಳ ಹಿಂದೆ ಹರಿಯಾಣದಲ್ಲಿ ರೈತ ಮಹಿಳೆಯರನ್ನು ಭೇಟಿಯಾಗಿದ್ದ ರಾಹುಲ್ ಗಾಂಧಿ ಅವರನ್ನು ದೆಹಲಿಗೆ ಆಹ್ವಾನಿಸಿದ್ದರು. ಭಾನುವಾರ ಪ್ರಿಯಾಂಕಾ ಗಾಂಧಿ ನಿವಾಸದಲ್ಲಿ ಹರಿಯಾಣ ಮಹಿಳೆಯರ ಹಾಡಿಗೆ ಸ್ವತಃ ಸೋನಿಯಾ ಗಾಂಧಿ ನರ್ತಿಸಿದ ವಿಡಿಯೋ ವೈರಲ್ ಆಗಿದೆ.
ನವದೆಹಲಿ (ಜು.16): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ವಿಶೇಷ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಹರಿಯಾಣದ ಸೋನೆಪತ್‌ನ ಕೆಲವು ಮಹಿಳೆಯರು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಅವರ ಪುತ್ರಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಹರಿಯಾಣಿ ಹಾಡುಗಳಿಗೆ ನೃತ್ಯ ಮಾಡುತ್ತಿದ್ದಾರೆ. ಸುಮಾರು 12 ನಿಮಿಷಗಳ ವಿಡಿಯೋ ಇದಾಗಿದ್ದು, ಸೋನೆಪತ್‌ನಿಂದ ಕೆಲವು ಮಹಿಳೆಯರನ್ನು ದೆಹಲಿಗೆ ಆಹ್ವಾನಿಸಲಾಗಿದೆ. ಅವರನ್ನು ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರೊಂದಿಗೆ ಭೇಟಿ ಮಾಡಿಸಿ ಮಾತುಕತೆ ನಡೆಸಲಾಗಿದೆ. ದೆಹಲಿಯಲ್ಲಿರುವ ಪ್ರಿಯಾಂಕಾ ಗಾಂಧಿ ನಿವಾಸಕ್ಕೆ ಆಗಮಿಸಿದ ಈ ಮಹಿಳೆಯರನ್ನು ಪ್ರಶ್ನಿಸಿದ ರಾಹುಲ್ ಗಾಂಧಿ, ದೆಹಲಿ ಹೇಗಿದೆ? ನೀವೆಲ್ಲೂ ಸುತ್ತಾಡೋಕೆ ಹೋಗಿಲ್ಲವೇ? ಎಂದು ಹೇಳಿದರು. ಅದಾದ ಬಳಿಕ ಸೋನಿಯಾ, ಪ್ರಿಯಾಂಕಾ ಹಾಗೂ ರಾಹುಲ್ ಅವರೊಂದಿಗೆ ಭೋಜನ ಕೂಟದಲ್ಲೂ ಭಾಗಿಯಾಗಿದ್ದರು. ವಿಡಿಯೋದ ಆರಂಭಿಕ ಭಾರತದಲ್ಲಿ ರಾಹುಲ್ ಗಾಂಧಿ ಮತ್ತು ಸೋನೆಪತ್‌ನ ಇಬ್ಬರು ರೈತರ ಜೊತೆಗಿನ ಸಂಭಾಷಣೆಯನ್ನು ಒಳಗೊಂಡಿದೆ. ಜುಲೈ 7ರಂದು ಶಿಮ್ಲಾಗೆ ತೆರಳಿದ್ದ ರಾಹುಲ್ ಸೋನೆಪತ್‌ನ ಮದೀನಾ ಗ್ರಾಮದಲ್ಲಿ ರೈತರನ್ನು ಭೇಟಿ ಮಾಡಿದ್ದರು.
ರಾಹುಲ್ ಜಮೀನಿನಲ್ಲಿ ಟ್ರ್ಯಾಕ್ಟರ್ ಓಡಿಸಿ, ಭತ್ತ ನಾಟಿ ಮಾಡಿ ರೈತರೊಂದಿಗೆ ಊಟ ಮಾಡಿದ್ದರು. ಆಗ ಅಲ್ಲಿನ ಮಹಿಳೆಯರಿಗೆ ದೆಹಲಿಗೆ ಬರುವಂತೆ ಆಹ್ವಾನ ನೀಡಿದ್ದರು. ಅದರ ಸಂಪೂರ್ಣ ವಿಡಿಯೋ ಇನ್ನೂ ಹೊರಬಿದ್ದಿಲ್ಲ.
ಜುಲೈ 7 ರಂದು ಸೋನಿಪತ್‌ನ ಮದೀನಾ ಗ್ರಾಮದಲ್ಲಿ ರಾಹುಲ್ ಗಾಂಧಿ ಮಹಿಳೆಯರೊಂದಿಗೆ ಮಾತುಕತೆ ನಡೆಸಿದ ವಿಡಿಯೋ ಕೂಡ ಪ್ರಕಟವಾಗಿತ್ತು. ಈ ವೇಳೆ ಮಹಿಳೆಯರ ಸಮಸ್ಯೆಗಳನ್ನು ಮತ್ತು ಅವರ ಮಕ್ಕಳ ಶಿಕ್ಷಣದ ಬಗ್ಗೆ ರಾಹುಲ್ ವಿಚಾರಿಸಿದರು. ಈ ಹಂತದಲ್ಲಿ ಒಬ್ಬ ಮಹಿಳೆ ನಿಮ್ಮ ಬಗ್ಗೆ ಏನನ್ನಾದರೂ ಹೇಳಿ ಎಂದಾಗ ನಾನು ದೆಹಲಿಯಿಂದ ಬಂದಿದ್ದೇನೆ ಎಂದು ಹೇಳಿದ್ದರು. ಈ ಹಂತದಲ್ಲಿ ನೀವು ಇಲ್ಲಿಗೆ ಬಂದಿದ್ದೀರಿ, ನಮ್ಮನ್ನು ನಿಮ್ಮ ಮನೆಗೆ ಆಹ್ವಾನಿಸೋದಿಲ್ಲವೇ ಎಂದು ಕೇಳುತ್ತಾರೆ. ಇದಕ್ಕೆ ಪ್ರತಿಯಾಗಿ ರಾಹುಲ್, ಸರ್ಕಾರ ನನ್ನ ಮನೆಯನ್ನು ಕಿತ್ತುಕೊಂಡಿದೆ. ಆದರೂ ತೊಂದರೆ ಇಲ್ಲ ನಾನು ನಿಮಗೆ ದೆಹಲಿಯನ್ನು ತೋರಿಸುತ್ತೇನೆ ಬನ್ನಿ ಎಂದಿದ್ದರು. ಆ ಬಳಿಕ ರಾಹುಲ್ ಗಾಂಧಿ ಫೋನ್‌ನಲ್ಲಿಯೇ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಮಾತನಾಡಿದ್ದರು.
ಬೆಂಗಳೂರು ವಿಪಕ್ಷಗಳ ಸಭೆಗೆ ಸೋನಿಯಾ: 24 ಪಕ್ಷಗಳ ನಾಯಕರಿಗೆ ಈ ಸಲ ಆಹ್ವಾನ
ಈ ರೈತ ಮಹಿಳೆಯರು ದೆಹಲಿಗೆ ಬರಬೇಕು ಅಂದುಕೊಂಡಿದ್ದಾರೆ. ಅದಕ್ಕೆ ವ್ಯವಸ್ಥೆ ಮಾಡಿಸು ಎಂದು ಫೋನ್‌ನಲ್ಲಿ ಪ್ರಿಯಾಂಕಾ ಗಾಂಧಿಗೆ ಹೇಳಿದ್ದು ಮಾತ್ರವಲ್ಲದೆ, ಮುಂದಿನ ಶುಕ್ರವಾರ ನಿಮ್ಮ ಮನೆಗೆ ಅವರನ್ನು ಕರೆದುಕೊಂಡು ಬರುತ್ತೇನೆ ಎಂದು ಹೇಳಿದ್ದರು. ಆ ಬಳಿಕ ರಾಹುಲ್ ಗಾಂಧಿ, ಸೋನೆಪತ್‌ಗೆ ವಿಶೇಷ ವಾಹನವನ್ನು ಕಳುಹಿಸಿ ಈ ಮಹಿಳೆಯರನ್ನು ದೆಹಲಿಗೆ ಕರೆತಂದಿದ್ದರು. ಅವರನ್ನು ಇಂಡಿಯಾ ಗೇಟ್ ಸುತ್ತಲೂ ಕರೆದುಕೊಂಡು ಹೋಗಲಾಯಿತು. ಇದಾದ ನಂತರ ಎಲ್ಲಾ ಮಹಿಳೆಯರು ಪ್ರಿಯಾಂಕಾ ಗಾಂಧಿ ಮತ್ತು ಸೋನಿಯಾ ಗಾಂಧಿಯನ್ನು ಭೇಟಿಯಾದರು.
'ದೇಶದ ಆತ್ಮಕ್ಕೆ ಮಣಿಪುರ ಹಿಂಸಾಚಾರದಿಂದ ಹಾನಿ' ಶಾಂತಿಗೆ ಮನವಿ ಮಾಡಿದ ಸೋನಿಯಾ ಗಾಂಧಿ