ನವದೆಹಲಿ(ಮಾ.04): ಆರ್‌ಎಸ್‌ಎಸ್‌ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ಪಾಕಿಸ್ತಾನದ ಮತೀಯ ತೀವ್ರಗಾಮಿಗಳು ನಡೆಸುವ ಮದ್ರಸಾಗಳಿದ್ದಂತೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ ರಾಹುಲ್‌ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಭಾರತ ಸರ್ಕಾರದ ಮಾಜಿ ಮುಖ್ಯ ಅರ್ಥಿಕ ಸಲಹೆಗಾರ ಕೌಶಿಕ್‌ ಬಸು ಅವರೊಂದಿಗೆ ಮಂಗಳವಾರ ಆನ್‌ಲೈನ್‌ ಮೂಲಕ ಸಂವಾದ ನಡೆಸಿದ ರಾಹುಲ್‌ ಗಾಂಧಿ ‘ಆರ್‌ಎಸ್‌ಎಸ್‌ ತನ್ನ ಶಾಲೆಗಳ ಮೂಲಕ ಭಾರತದ ಇತಿಹಾಸ, ಸಂಸ್ಕೃತಿಯ ಮೇಲೆ ದಾಳಿ ನಡೆಸುತ್ತಿದೆ. ಪಾಕಿಸ್ತಾನದ ಮತೀಯ ತೀವ್ರವಾದಿಗಳು ನಡೆಸುವ ಮದ್ರಸಾಗಳ ರೀತಿಯಲ್ಲೇ ಆರ್‌ಎಸ್‌ಎಸ್‌ ಕೂಡಾ ವಿಶ್ವದೆಡೆಗಿನ ತನ್ನ ದೃಷ್ಟಿಕೋನವನ್ನು ತುರುಕಲ ಶಾಲೆಗಳನ್ನು ಬಳಸಿಕೊಳ್ಳುತ್ತಿದೆ. ಭಾರತದಲ್ಲಿ ಇದೀಗ ಇಡೀ ಶಿಕ್ಷಣ ವ್ಯವಸ್ಥೆಯ ಮೇಲೇ ದಾಳಿ ನಡೆದಿದೆ. ಇತಿಹಾಸವನ್ನು ಹೊಸದಾಗಿ ಬರೆಯುವುದು, ಸಾಮಾಜಿಕ ನಡವಳಿಕೆಗಳ ಕುರಿತು ಹೊಸ ವ್ಯಾಖ್ಯಾನ, ಭಾರತೀಯ ಸಂವಿಧಾನದ ಮೂಲ ಚಿಂತನೆಗಳ ಮೇಲೇ ದಾಳಿ, ಸಮಾನತೆಯ ಮೇಲೆ ದಾಳಿ ಅವುಗಳಿಗೆ ಉದಾಹರಣೆ.’ ಎಂದು ರಾಹುಲ್‌ ಟೀಕಿಸಿದ್ದಾರೆ.

ಆರ್‌ಎಸ್‌ಎಸ್‌ ದೇಶಭಕ್ತಿಯಲ್ಲಿ ವಿಶ್ವದಲ್ಲೇ ಅತಿದೊಡ್ಡ ಶಾಲೆ: ರಾಹಲ್‌ಗೆ ಬಿಜೆಪಿ ತಿರುಗೇಟು

ಆರ್‌ಎಸ್‌ಎಸ್‌ ಕುರಿತ ರಾಹುಲ್‌ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ದೇಶಭಕ್ತಿಯಲ್ಲಿ ಆರ್‌ಎಸ್‌ಎಸ್‌ ವಿಶ್ವದಲ್ಲೇ ಅತಿದೊಡ್ಡ ಶಾಲೆ ಇದ್ದಂತೆ. ಹೀಗಾಗಿಯೇ ಅದು ಇಂದಿಗೂ ಅಷ್ಟುದೊಡ್ಡ ಸ್ಥಾನವನ್ನು ಹೊಂದಿದೆ. ಜನರಲ್ಲಿ ಉತ್ತಮ ಬದಲಾವಣೆ ತರುವುದು ಮತ್ತು ಜನರಲ್ಲಿ ದೇಶಭಕ್ತಿಯ ಕುರಿತು ಸ್ಪೂರ್ತಿ ನೀಡುವುದು ಆರ್‌ಎಸ್‌ಎಸ್‌ ಕೆಲಸ. ಆರ್‌ಎಸ್‌ಎಸ್‌ ಬಗ್ಗೆ ಅರಿಯಲು ಕಾಂಗ್ರೆಸ್‌ ನಾಯಕರಿಗೆ ಇನ್ನೂ ಬಹಳಷ್ಟುಸಮಯ ಬೇಕು ಎಂದು ಬಿಜೆಪಿ ನಾಯಕ, ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ವ್ಯಂಗ್ಯವಾಡಿದ್ದಾರೆ.