ಟೆಂಪೋ ಬಿಲಿಯನೇರ್‌ಗಳ ಕೈಗೊಂಬೆ ರಾಜ ಪ್ರಧಾನಿ ಮೋದಿ: ರಾಹುಲ್ ಗಾಂಧಿ ವಾಗ್ದಾಳಿ
‘ನರೇಂದ್ರ ಮೋದಿ ಪ್ರಧಾನಿಯಲ್ಲ, ಅವರೊಬ್ಬ ರಾಜ. ಆದರೆ ಟೆಂಪೋ ಬಿಲಿಯನೇರ್‌ಗಳ ಕೈಗೊಂಬೆ ರಾಜ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿ (ಮೇ.12): ‘ನರೇಂದ್ರ ಮೋದಿ ಪ್ರಧಾನಿಯಲ್ಲ, ಅವರೊಬ್ಬ ರಾಜ. ಆದರೆ ಟೆಂಪೋ ಬಿಲಿಯನೇರ್‌ಗಳ ಕೈಗೊಂಬೆ ರಾಜ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ಅದಾನಿ ಮತ್ತು ಅಂಬಾನಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಟೆಂಪೋ ಲೋಡ್‌ಗಳಲ್ಲಿ ಹಣ ಬಂದಿದೆ’ ಎಂಬ ಮೋದಿ ಆರೋಪಕ್ಕೆ ತಿರುಗೇಟು ನೀಡುವುದನ್ನು ಮುಂದುವರೆಸಿರುವ ಅವರು, ‘ಮೋದಿಜಿ ಪ್ರಧಾನಿಯಲ್ಲ. ಅವರೊಬ್ಬ ರಾಜ.
ಅವರಿಗೆ ಸಚಿವ ಸಂಪುಟ, ಸಂಸತ್ತು ಅಥವಾ ಸಂವಿಧಾನದಿಂದ ಏನೂ ಆಗಬೇಕಿಲ್ಲ. ಅವರು 21ನೇ ಶತಮಾನದ ರಾಜ. ಹಣವೆಂಬ ನಿಜವಾದ ಅಧಿಕಾರವನ್ನು ಹೊಂದಿರುವ ಎರಡು ಅಥವಾ ಮೂರು ಬಂಡವಾಳಗಾರರ ಮುಖವಾಣಿ ಅವರು. ಮೋದಿಜಿ ಅವರ ಸೂತ್ರ ಟೆಂಪೋ ಬಿಲಿಯನೇರ್‌ಗಳ ಕೈಲಿದೆ’ ಎಂದು ಹೇಳಿದ್ದಾರೆ.
ಇಂದಿರಾ ಗಾಂಧಿ ನೋಡಿ ಪ್ರಧಾನಿ ಮೋದಿ ಧೈರ್ಯ ಕಲಿಯಲಿ: ಪ್ರಿಯಾಂಕಾ ಗಾಂಧಿ
ಉತ್ತರ ಪ್ರದೇಶದ ಲಖನೌನಲ್ಲಿ ಶನಿವಾರ ಚುನಾವಣಾ ಪ್ರಚಾರ ಭಾಷಣ ಮಾಡಿ ವಾಗ್ದಾಳಿ ನಡೆಸಿದ ಅವರು, ಅದೇ ಭಾಷಣದ ಆಯ್ದ ಅಂಶಗಳನ್ನು ಟ್ವೀಟ್ (ಎಕ್ಸ್) ಕೂಡ ಮಾಡಿ ಮೋದಿ ವಿರುದ್ಧ ಮುಗಿಬಿದ್ದರು. ಬುಧವಾರ ಪ್ರಚಾರ ಸಮಾವೇಶವೊಂದರಲ್ಲಿ ಮಾತನಾಡಿದ್ದ ಮೋದಿ, ‘ಅಂಬಾನಿ ಮತ್ತು ಅದಾನಿಯಿಂದ ಟೆಂಪೋ ಲೋಡ್‌ಗಟ್ಟಲೆ ಕಪ್ಪು ಹಣ ಕಾಂಗ್ರೆಸ್‌ಗೆ ಬಂದಿದೆ. ಹೀಗಾಗಿ ಇಬ್ಬರು ಉದ್ಯಮಿಗಳ ವಿರುದ್ಧ ರಾಹುಲ್ ಮಾತನಾಡುವುದನ್ನು ನಿಲ್ಲಿಸಿದ್ದಾರೆ’ ಎಂದು ಹೇಳಿದ್ದರು.