ತೂತುಕುಡಿ(ಫೆ.28): ಭಾರತ-ಚೀನಾ ಗಡಿ ಉದ್ವಿಗ್ನತೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ನಮ್ಮ ಪ್ರಧಾನಿ ಭಯಭೀತರಾಗಿದ್ದಾರೆ ಎಂದು ಚೀನೀಯರಿಗೂ ಗೊತ್ತಿದೆ ಎಂದು ಕುಹಕವಾಡಿದ್ದಾರೆ.

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ 3 ದಿನಗಳ ಕಾಲ ತಮಿಳುನಾಡಿಗೆ ಭೇಟಿ ನೀಡಿರುವ ರಾಹುಲ್‌ ಗಾಂಧಿ ಶನಿವಾರ ಮಾತನಾಡಿ, ‘2017ರಲ್ಲಿ ಚೀನಾ ಡೋಕ್ಲಾಂ ಪ್ರದೇಶದ ಅತಿಕ್ರಮಣ ಮಾಡಿ ಭಾರತ ಹೇಗೆ ಪ್ರತಿಕ್ರಿಯಿಸಬಹುದೆಂದು ಪರೀಕ್ಷಿಸಿತು. ಆದರೆ ಭಾರತ ಪ್ರತಿಕ್ರಿಯಿಸಲಿಲ್ಲ. ಹಾಗಾಗಿ ಚೀನಾ ಮುಂದೆ ಲಡಾಖ್‌ನಲ್ಲಿ ಅತಿಕ್ರಮಕ್ಕೆ ಮುಂದಾಯಿತು. ಆಗಲೂ ಪ್ರಧಾನಿ ಮೋದಿ ‘ಭಾರತಕ್ಕೆ ಯಾರೂ ಕಾಲಿಟ್ಟಿಲ್ಲ’ ಎಂದು ಹೇಳಿದರು. ಇದರಿಂದಾಗಿ ಭಾರತ ಪ್ರಧಾನಿ ಭಯಭೀತರಾಗಿದ್ದಾರೆ ಎಂದು ಚೀನಾಗೆ ಅರ್ಥವಾಗಿತ್ತು’ ಎಂದು ಛಾಟಿ ಬೀಸಿದರು.

ಇದೇ ವೇಳೆ ಪ್ರಧಾನಿ ಮೋದಿ ದೇಶದ ಇಬ್ಬರು ವ್ಯಕ್ತಿಗಳಿಗೆ ಮಾತ್ರ ಉಪಯುಕ್ತರಾಗಿದ್ದಾರೆ. ಆ ಎರಡು ಜನ ಪ್ರಧಾನಿಯನ್ನು ಬಳಸಿಕೊಂಡು ತಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.