ನವದೆಹಲಿ(ಜ.04): ಕೊರೋನಾ ನಿಯಂತ್ರಣದ ಲಸಿಕೆಯಲ್ಲಿ ಹಂದಿಮಾಂಸದಲ್ಲಿನ ಪ್ರೋಟಿನ್‌ಗಳ ಬಳಕೆಯ ಹೊರತಾಗಿಯೂ, ಮುಸ್ಲಿಮರಿಗೆ ಲಸಿಕೆ ಸ್ವೀಕಾರಾರ್ಹವಾಗಿದೆ ಎಂದು ಮುಸ್ಲಿಂ ಧರ್ಮ ಗುರುಗಳು ಸ್ಪಷ್ಟಪಡಿಸಿದ್ದಾರೆ. ತನ್ಮೂಲಕ ದೇಶದಲ್ಲಿ ಕೊರೋನಾ ಲಸಿಕೆ ಅಭಿಯಾನ ಆರಂಭವಾದ ಬಳಿಕ ಮುಸ್ಲಿಮರು ಲಸಿಕೆ ಪಡೆಯಬಹುದು ಎಂಬುದಾಗಿ ಸ್ಪಷ್ಪಡಿಸಿದಂತಾಗಿದೆ.

ಮುಸ್ಲಿಮರಿಗೆ ನಿಷಿದ್ಧವಾದ ಹಂದಿ ದೇಹದ ಪ್ರೋಟಿನ್‌ಗಳನ್ನು ಬಳಸಿ ಸಿದ್ಧಪಡಿಸಲಾದ ಕೊರೋನಾ ಲಸಿಕೆಯು ಮುಸ್ಲಿಮರಿಗೆ ಸ್ವೀಕಾರಾರ್ಹವಲ್ಲ. ಮುಸ್ಲಿಮರಾರ‍ಯರು ಈ ಲಸಿಕೆ ಪಡೆಯಬಾರದು ಎಂದು ಕೆಲ ಮುಸ್ಲಿಂ ಧರ್ಮಗುರುಗಳು ಹೇಳಿದ್ದರು. ಮಹಾಮಾರಿ ವೈರಸ್‌ನಿಂದ ರಕ್ಷಣೆ ಪಡೆಯುವುದು ಬಹುಮುಖ್ಯ. ಹೀಗಾಗಿ ಕೊರೋನಾ ಲಸಿಕೆಯು ಹಂದಿಯ ಪ್ರೋಟಿನ್‌ಗಳನ್ನು ಒಳಗೊಂಡಿದ್ದಾಗ್ಯೂ, ಆ ಲಸಿಕೆ ಸ್ವೀಕರಿಸಬಹುದಾಗಿದೆ ಎಂದು ಜಮಾತ್‌-ಇ-ಇಸ್ಲಾಮಿ ಹಿಂದ್‌ ಭಾನುವಾರ ಹೇಳಿದೆ.

ಅಲ್ಲದೆ ಈ ಬಗ್ಗೆ ಪ್ರತಿಕ್ರಿಯಿಸಿದ ಜಾಮಿಯತ್‌-ಇ-ಹಿಂದ್‌ ಅಧ್ಯಕ್ಷ ಅರ್ಷದ್‌ ಮದಾನಿ, ಮನುಷ್ಯನನ್ನು ರಕ್ಷಿಸುವ ಎಲ್ಲ ಕಾರ್ಯಗಳು ಸ್ವೀಕಾರಾರ್ಹವಾಗಿವೆ. ಕೋವಿಡ್‌-19 ವೈರಸ್‌ನಿಂದ ರಕ್ಷಿಸಿಕೊಳ್ಳಲು ನಾವೆಲ್ಲರೂ ಲಸಿಕೆಯನ್ನು ಪಡೆಯಲೇಬೇಕು ಎಂದು ಪ್ರತಿಪಾದಿಸಿದ್ದಾರೆ.