ನವದೆಹಲಿ(ಏ.29): ಭಾರತದಲ್ಲಿ ಕೊರೋನಾ ವೈರಸ್‌ಗೆ ಬಲಿಯಾದವರ ಸಂಖ್ಯೆ ಸಾವಿರ ದಾಟಿದೆ. ಇದು ಸರ್ಕಾರವನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ. ಹೀಗಾಗಿ 2.0 ಮುಗಿಯುವ ಹೊತ್ತಲ್ಲೇ ಮೂರನೇ ಬಾರಿ ಲಾಕ್ ಡೌನ್ ಮುಂದುವರೆಸುವ ಮಾತುಗಳು ಶುರುವಾಗಿವೆ. ಮೇ. 1 ರಂದು ಪ್ರಧಾನಿ ಮೋದಿ ದೇಶದ ಜನತೆನ್ನುದ್ದೇಶಿ ಮಾತನಾಡಲಿದ್ದಾರೆ. ಈ ವೇಳೆ ಲಾಕ್‌ಡೌನ್ ವಿಸ್ತರಣೆ ಅಥವಾ ಅಂತ್ಯದ ಕುರಿತು ಸ್ಪಷ್ಟತೆ ಸಿಗಲಿದೆ. ಆದರೆ ಮೋದಿಗೂ ಮುನ್ನವೇ ತೆಲಂಗಾಣ ಹಾಗೂ ಪಂಜಾಬ್ ರಾಜ್ಯಗಳು ಲಾಕ್‌ಡೌನ್ ವಿಸ್ತರಿಸಿದೆ.

ಪಾರ್ಸೆಲ್ ಮೂಲಕ ಎಣ್ಣೆ ಮಾರಾಟ, ದಿನಕ್ಕೆ 5 ಗಂಟೆ ಮಾತ್ರ?

ಕಾಂಗ್ರೆಸ್ ಯೇತರ ಸರ್ಕಾರಗಳು ಲಾಕ್ ಡೌನ್ ವಿಸ್ತರಣೆ ಶುರು ಮಾಡಿವೆ. ಪಂಜಾಬ್ ಸರ್ಕಾರ ಮತ್ತೆ 2 ವಾರ ಲಾಕ್‌ಡೌನ್ ವಿಸ್ತರಿಸಿದೆ. ಆದರೆ ಈ ಬಾರಿ ಕೊಂಚ ರಿಲಾಕ್ಸ್ ಮಾಡಲಾಗಿದೆ. ಪ್ರತಿನಿತ್ಯ ಬೆಳಗ್ಗೆ 7 ಗಂಟೆಯಿಂದ 11 ಗಂಟೆಯವರೆಗೂ ಲಾಕ್‌ಡೌನ್ ರಿಲ್ಯಾಕ್ಸ್ ಮಾಡಲಾಗಿದ್ದು. ಬಳಿಕ ಯಾರೂ ಹೊರಬರುವಂತಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಆದೇಶ ನೀಡಿದ್ದಾರೆ.

ಪಂಜಾಬ್ ಲಾಕ್‌ಡೌನ್ 3.0 ಪ್ರಕಾರ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ. ಇನ್ನು ರೆಡ್ ಝೋನ್‌ಗಳಲ್ಲಿ ಕರ್ಫ್ಯೂ ಜಾರಿ ಮುಂದುವರಿಸಿದೆ. ಆದರೆ ಗ್ರೀನ್ ಝೋನ್‌ಗಳಲ್ಲಿ ನಿಯಮ ಸಡಿಲಿಕೆ ಮಾಡಿದೆ. ಅಗತ್ಯ ವಸ್ತು ಖರೀದಿಸಲು ಮಾತ್ರ ಅವಕಾಶ ನೀಡಲಾಗಿದೆ. ದಿನಕ್ಕೆ ನಾಲ್ಕು ಗಂಟೆ ಶೇಕಡಾ 50 ರಷ್ಟು ನೌಕರರೊಂದಿಗೆ ಅಂಗಡಿ ತೆರಯಬೇಕು, ಇಷ್ಟೇ ಅಲ್ಲ ಕೇಂದ್ರ ಇಲಾಖೆ ಮಾರ್ಗಸೂಚಿ ಪಾಲಿಸಬೇಕು ಎಂದು ಪಂಜಾಬ್ ಸರ್ಕಾರ ಹೇಳಿದೆ.

ಶಾಕಿಂಗ್: ಗ್ರೀನ್‌ ಝೋನ್‌ಗೂ ವಕ್ಕರಿಸಿದ ಕೊರೋನಾ, ಬೆಚ್ಚಿಬಿದ್ದ ಜನ..!.

ತೆಲಂಗಾಣದಲ್ಲಿ ಮೇ. 7ರ ವರೆಗೆ ಲಾಕ್‌ಡೌನ್ ವಿಸ್ತರಣೆಯಾಗಲಿದೆ. ಸದ್ಯ ಇರು ಲಾಕ್‌ಡೌನ್ ಮಾರ್ಗಸೂಚಿ ಪ್ರಕಾರ ಮೇ.7ರ ವರೆಗೆ ತೆಲಂಗಾಣದಲ್ಲಿ ಲಾಕ್‌ಡೌನ್ ಜಾರಿಯಲ್ಲಿರಲಿದೆ. ಇನ್ನು ಪ್ರಧಾನಿ ಮೋದಿ ನಿರ್ಧಾರ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತೆಲಂಗಾಣ ಹೇಳಿದೆ. ಇತ್ತ ಪಶ್ಚಿಮ ಬಂಗಾಳದಲ್ಲಿ ಮೇ.3ರ ಬಳಿಕ ಇತರ ಸೇವೆಗೂ ಅನುಮತಿ ನೀಡುವುದಾಗಿ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಬಿಜೆಪಿ ಸರ್ಕಾರಗಳು ಲಾಕ್‌ಡೌನ್ ವಿಸ್ತರಣೆ ಕುರಿತ ಯಾವುದೇ ಮಾಹಿತಿ ನೀಡಿಲ್ಲ. ಎಲ್ಲವೂ ಕೇಂದ್ರದ ನಿರ್ಧಾರದ ಮೇಲೆ ನಿಂತಿವೆ ಎನ್ನುತ್ತಿವೆ. ಇತ್ತ ಕೇಂದ್ರ ಸರ್ಕಾರ ಮತ್ತೆ ಲಾಕ್‌ಡೌನ್ ವಿಸ್ತರಿಸುವ ಕುರಿತು ನಿರಾಸಕ್ತಿ ತೋರಿಸಿದೆ. ಇದರ ಬದಲಾಗಿ ಆಯಾ ರಾಜ್ಯಗಳಿಗೆ ಸಂಪೂರ್ಣ ಅಧಿಕಾರ ನೀಡಲು ನಿರ್ಧರಿಸಿದೆ. ಇಷ್ಟೇ ಅಲ್ಲ ರೆಡ್ , ಗ್ರೀನ್  ಝೋನ್‌ಗಳ ವಿಂಗಡನೆ ಮೂಲಕ ಕಟ್ಟು ನಿಟ್ಟಿನ ಲಾಕ್‌ಡೌನ್ ನಿಯಮ ಜಾರಿ ಮಾಡಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ.