ಪುಣೆ(ಏ.03): ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಕೊರೋನಾ ಸೋಂಕು ವಿಪರೀತ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಶನಿವಾರದಿಂದ ಏಳು ದಿನಗಳ ಕಾಲ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ. ಕಳೆದೆರಡು ದಿನಗಳಿಂದ ಸತತವಾಗಿ ಜಿಲ್ಲೆಯಲ್ಲಿ 8000ಕ್ಕೂ ಹೆಚ್ಚು ಕೊರೋನಾ ಸೋಂಕಿತರು ಪತ್ತೆಯಾಗಿರುವುದರಿಂದ ಜಿಲ್ಲಾಡಳಿತ ಈ ಕಠಿಣ ಕ್ರಮ ಕೈಗೊಂಡಿದೆ.

ಶುಕ್ರವಾರ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಏ.3ರಿಂದ ಏಳು ದಿನಗಳ ಕಾಲ ಜಿಲ್ಲೆಯಲ್ಲಿ ಎಲ್ಲಾ ಹೋಟೆಲ್‌ಗಳು, ಬಾರ್‌ ಮತ್ತು ರೆಸ್ಟೋರೆಂಟ್‌ಗಳು, ಮಾಲ್‌ಗಳು, ಸಿನಿಮಾ ಥಿಯೇಟರ್‌ಗಳು, ಧಾರ್ಮಿಕ ಕೇಂದ್ರಗಳು ಹಾಗೂ ಸಾರ್ವಜನಿಕ ಸ್ಥಳಗಳನ್ನು ಮುಚ್ಚಲು ನಿರ್ಧರಿಸಲಾಗಿದೆ. ಸಂಜೆ 6ರಿಂದ ಬೆಳಗಿನ ಜಾವ 6 ಗಂಟೆಯವರೆಗೆ ಜಿಲ್ಲೆಯಾದ್ಯಂತ ಕಫä್ರ್ಯ ವಿಧಿಸಲಾಗುತ್ತದೆ. ಒಂದು ವಾರದ ನಂತರ ಪರಿಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಬೇಕು ಎಂದು ನಿರ್ಧರಿಸಲಾಗಿದೆ.

ಈ ಏಳು ದಿನಗಳ ಅವಧಿಯಲ್ಲಿ ಅಂತ್ಯಕ್ರಿಯೆ ಮತ್ತು ಪೂರ್ವನಿಗದಿತ ಮದುವೆಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಮದುವೆಗೆ ಗರಿಷ್ಠ 50 ಜನರು ಹಾಗೂ ಅಂತ್ಯಕ್ರಿಯೆಗೆ 20 ಜನರು ಸೇರಬಹುದು. ಇನ್ನೆಲ್ಲಾ ಸಾಮಾಜಿಕ ಒಗ್ಗೂಡುವಿಕೆಯನ್ನು ನಿಷೇಧಿಸಲಾಗಿದೆ. ಆಹಾರ ಪದಾರ್ಥಗಳ ಹೋಮ್‌ ಡೆಲಿವರಿಗೆ ಅನುಮತಿ ನೀಡಲಾಗಿದೆ.