ಮುಂಬೈ: ಮನೆಕೆಲಸದವರು ಮೊಬೈಲ್‌ನಲ್ಲೇ ಕೆಲಸಕ್ಕೆ ಬರುವ, ಬರದೇ ಇರುವ ಮಾಹಿತಿಯನ್ನು ಮನೆ ಮಾಲೀಕರಿಗೆ ನೀಡುವುದು ಹಳೇ ವಿಷಯ. ಆದರೆ ಮಹಾರಾಷ್ಟ್ರದ ಪುಣೆಯ ಗೀತಾ ಕಾಳೆ ಎಂಬ ಮಹಿಳೆ ವಿಶೇಷ ವಿಸಿಟಿಂಗ್ ಕಾರ್ಡ್ ಮಾಡಿಸಿಕೊಂಡು ಗಮನ ಸೆಳೆದಿದ್ದಾರೆ.

ಅದರಲ್ಲೂ ಇವರ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ಬಳಿಕ ಆಕೆಗೆ ಮನೆ ಕೆಲಸ ಮಾಡಲು ಆಗದಷ್ಟು ದೂರವಾಣಿ ಕರೆಗಳು ಬರುತ್ತಿವೆಯಂತೆ. ಗೀತಾಳ ಕಥೆ ಹೀಗೆ ವೈರಲ್ ಆಗಿದ್ದರ ಹಿಂದೆ ಒಂದು ಕಥೆ ಇದೆ. ಆಗಿದ್ದೇನು?: ಒಂದು ದಿನ ಧನಶ್ರೀ ಶಿಂಧೆ ಎಂಬುವರ ಮನೆಗೆ ಕೆಲಸಕ್ಕೆ ಬಂದಿದ್ದ ಗೀತಾ ಕಾಳೆ ಮೊಗದಲ್ಲಿ ಆತಂಕ ಆವರಿಸಿತ್ತು. ಇದನ್ನು ಗಮನಿಸಿದ ಶಿಂಧೆ ಕಾರಣ ಕೇಳಿದಾಗ, ತಾನು ಮನೆ ಕೆಲಸ ಕಳೆದುಕೊಂಡ ಬಗ್ಗೆ ಗೀತಾ ತಿಳಿಸಿದ್ದಳು. ಈ ಹಿನ್ನೆಲೆ ಶಿಂಧೆ, ಈ ವಿಶೇಷವಾದ ವಿಸಿಟಿಂಗ್ ಕಾರ್ಡ್ ರೂಪಿಸಿಕೊಟ್ಟಿದ್ದರು. ಅದರಲ್ಲಿ ಗೀತಾ ಹೆಸರು, ಮೊಬೈಲ್ ನಂಬರ್, ಯಾವ್ಯಾವ ಕೆಲಸಕ್ಕೆ ಎಷ್ಟೆಷ್ಟು ಶುಲ್ಕ ಎಂಬುದರ ಜೊತೆಗೆ ‘ಘರ್ ಕಾಮ್ ಮೌಷಿ ಇನ್ ಬವ್ದಾನ್. ಆಧಾರ್ ವೆರಿಫೈಡ್’ ಮುದ್ರಿಸಲಾಗಿತ್ತು.