ಪುದುಚೇರಿ(ಜು.26): ಪ್ರಾದೇಶಿಕ ಸಮತೋಲನ ಮತ್ತಿತರೆ ವಿಷಯಕ್ಕಾಗಿ ವಿಧಾನಸಭೆ ಅಧಿವೇಶನವನ್ನು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆಸುವುದು ಗೊತ್ತು. ಆದರೆ ಪುದುಚೇರಿಯಲ್ಲಿ ರಾಜ್ಯ ವಿಧಾನಸಭೆಯ ಕಲಾಪವನ್ನು ಬೇವಿನ ಮರದ ಕೆಳಗೆ ನಡೆಸಿದ ಅಚ್ಚರಿಯ ಘಟನೆ ಶನಿವಾರ ನಡೆದಿದೆ.

ಜು.20ರಿಂದ ಪಾಂಡಿಚೇರಿ ವಿಧಾನಸಭೆಯ ಬಜೆಟ್‌ ಅಧಿವೇಶನ ಆರಂಭವಾಗಿತ್ತು. ಆದರೆ ಶುಕ್ರವಾರ ರಾತ್ರಿ ವಿಪಕ್ಷದ ಎಸ್‌.ಎಸ್‌.ಜೆ. ಜಯಲಾಲ್‌ ಕೊರೋನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ವಿಧಾನಸಭೆ ಹಾಲ್‌ನಲ್ಲಿ ಸೋಂಕು ನಿವಾರಕ ಔಷಧ ಸಿಂಪಡಣೆ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಮತ್ತೊಂದೆಡೆ ಅಧಿವೇಶನ ಮುಂದೂಡವತೆಯೂ ಇರಲಿಲ್ಲ.

ಕೊರೋನಾ ಮಧ್ಯೆ ಬಿಎಸ್‌ ಯಡಿಯೂರಪ್ಪಗೆ ಎದುರಾಯ್ತು ಕೋರ್ಟ್ ಸಂಕಷ್ಟ

ಹೀಗಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಸ್ಪೀಕರ್‌ ವಿಧಾನಸಭೆಯ ಮುಂದಿನ ಆವರಣದ ಬೇವಿನ ಮರದ ಕೆಳಗೆ ಶಾಮಿಯಾನ ಕುರ್ಚಿ ಹಾಕಿಸಿ ಅಲ್ಲೇ ಅಧಿವೇಶನಕ್ಕೆ ವ್ಯವಸ್ಥೆ ಮಾಡಿದ್ದಾರೆ. ಹೀಗೆ ಮಧ್ಯಾಹ್ನ 1.30ರಿಂದ 3.30ರವರೆಗೆ ಕಲಾಪ ನಡೆಸಲಾಗಿದೆ. ಕಲಾಪದಲ್ಲಿ ಯಾವುದೇ ಚರ್ಚೆಯಿಲ್ಲದೆ 9 ಸಾವಿರ ಕೋಟಿ ರು. ಬಜೆಟ್‌ಗೆ ಒಪ್ಪಿಗೆ ಪಡೆದ ಬಳಿಕ ದಿನದ ಅನಿರ್ದಿಷ್ಟಾವಧಿಗೆ ಅಧಿವೇಶನ ಮುಂದೂಡಲಾಯಿತು.