ಮಂಡ್ಯ(ಅ.11): ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಅನುಷ್ಠಾನಗೊಳಿಸಲುದ್ದೇಶಿಸಿರುವ ಎಪಿಎಂಸಿ ಕಾಯ್ದೆ ಮತ್ತು ಭೂಸುಧಾರಣಾ ಕಾಯ್ದೆ ವಿರುದ್ಧ ಕಹಳೆ ಮೊಳಗಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಉಭಯ ಸರ್ಕಾರಗಳ ರೈತ ವಿರೋಧಿ ನೀತಿಗಳ ವಿರುದ್ಧ ರಾಜ್ಯದ 2 ಕೋಟಿ ನಾಗರಿಕರ ಸಹಿ ಸಂಗ್ರಹಿಸಿ ರಾಷ್ಟ್ರಪತಿಗೆ ಕಳುಹಿಸಲಾಗುವುದು ಎಂದು ಘೋಷಿಸಿದ್ದಾರೆ. ಇದೇವೇಳೆ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಸಹ ಹೋರಾಟದ ಅಖಾಡಕ್ಕಿಳಿಯಲಿದ್ದು ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್‌ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಹೋರಾಟಕ್ಕೆ ಶಕ್ತಿ ತುಂಬಲಿರುವುದಾಗಿ ತಿಳಿಸಿದ್ದಾರೆ.

ನಗರದ ಅಂಬೇಡ್ಕರ್‌ ಭವನದಲ್ಲಿ ಶನಿವಾರ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ರೈತ ವಿರೋಧಿ ನೀತಿಗಳ ವಿರುದ್ಧ ರೈತಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಭೂಮಿಯನ್ನು ಭೂ ಮಾಫಿಯಾದವರಿಗೆ ಮಾರಾಟ ಮಾಡಲು ಸರ್ಕಾರ ಹೊರಟಿದೆ. ಆ ಮೂಲಕ ಅನ್ನದಾತರನ್ನು ಬೀದಿಗೆ ತಳ್ಳುವ ಸಂಚು ಅಡಗಿದೆ, ಕಪ್ಪುಹಣ ಹೊಂದಿರುವವರು ಬಿಳಿ ಹಣ ಮಾಡಿಕೊಳ್ಳುವುದಕ್ಕೆ ತಿದ್ದುಪಡಿ ಕಾಯಿದೆಗಳು ಅನುಕೂಲ ಮಾಡಿಕೊಟ್ಟಿವೆ. ಮಂಡ್ಯದಲ್ಲಿ ಎದ್ದಿರುವ ರೈತ ಧ್ವನಿ ಮೂಲಕ 2 ಕೋಟಿ ಜನರ ಸಹಿ ಸಂಗ್ರಹಿಸಿ ರಾಷ್ಟ್ರಪತಿಗೆ ಕಳುಹಿಸುವ ಗುರಿ ಹೊಂದಲಾಗಿದೆ. ಇಷ್ಟುಜನರ ಸಹಿ ಹಾಗೂ ಮೊಬೈಲ್‌ ನಂಬರ್‌ ಸಂಗ್ರಹಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದು ಕರೆ ನೀಡಿದರು.

ಮಾತ್ರವಲ್ಲದೆ ಮುಂದಿನ ತಿಂಗಳು ಬೆಂಗಳೂರಿಗೆ ಕಾಂಗ್ರೆಸ್‌ ನಾಯಕಿ ಸೋನಿಯಾಗಾಂಧಿ, ರಾಹುಲ್‌ ಗಾಂಧಿ ಆಗಮಿಸಿ ಹೋರಾಟಕ್ಕೆ ಮತ್ತಷ್ಟುಶಕ್ತಿ ತುಂಬಲಿದ್ದಾರೆ. ಇದೊಂದು ಪಕ್ಷಾತೀತ ಹೋರಾಟವಾಗಿದ್ದು ಇದರಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ವಿನಂತಿಸಿದರು.