Asianet Suvarna News Asianet Suvarna News

Prophet Remarks Row: ಬಂಧನಕ್ಕೆ ತಡೆ ಕೋರಿ ನೂಪುರ್ ಶರ್ಮಾ ಸುಪ್ರೀಂ ಕೋರ್ಟ್‌ಗೆ ಅರ್ಜಿ!

ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರು ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಬಂಧನಕ್ಕೆ ತಡೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರವಾದಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ನೂಪುರ್ ವಿರುದ್ಧ ದೇಶಾದ್ಯಂತ ಸಾಕಷ್ಟು ಎಫ್‌ಐಆರ್ ದಾಖಲಾಗಿದೆ. ನೂಪುರ್ ಅವರು ಎಲ್ಲಾ ಎಫ್‌ಐಆರ್‌ಗಳನ್ನು ಒಂದೆಡೆಗೆ ತರಲು ನಿರ್ದೇಶನವನ್ನು ಕೋರಿದ್ದಾರೆ. ನೂಪುರ್ ಶರ್ಮಾ ತಮಗಿರುವ ಜೀವ ಬೆದರಿಕೆಯ ಬಗ್ಗೆಯೂ ಕೋರ್ಟ್‌ಗೆ ತಿಳಿಸಿದ್ದಾರೆ.

Prophet Remarks Row Nupur Sharma petitions Supreme Court seeking stay on arrest san
Author
Bengaluru, First Published Jul 18, 2022, 8:04 PM IST

ನವದೆಹಲಿ (ಜುಲೈ 18): ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರಕರಣಗಳಲ್ಲಿ ತಮ್ಮ ಬಂಧನವನ್ನು ಪ್ರಶ್ನಿಸಿ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್‌ನಿಂದ ಅನಿರೀಕ್ಷಿತ ಮತ್ತು ಕಟುವಾದ ಟೀಕೆಗಳ ನಂತರ, ತನಗೆ ಜೀವ ಬೆದರಿಕೆ ಮತ್ತು ಅತ್ಯಾಚಾರ ಬೆದರಿಕೆಗಳು ಬಂದಿವೆ ಎಂದು ಆರೋಪಿಸಿ ಶರ್ಮಾ ತನ್ನ ವಿರುದ್ಧ ದಾಖಲಾಗಿರುವ 9 ಎಫ್‌ಐಆರ್‌ಗಳಲ್ಲಿ ಬಂಧನದಿಂದ ರಕ್ಷಣೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ತನ್ನ ವಿರುದ್ಧ ದೆಹಲಿಯಲ್ಲಿ ಎಫ್‌ಐಆರ್ ದಾಖಲಾಗಿರುವುದರಿಂದ, ಇತರ ಸ್ಥಳಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ದೆಹಲಿ ಪ್ರಕರಣದೊಂದಿಗೆ ಜೋಡಿಸಬೇಕು ಎಂದು ಶರ್ಮಾ ದೇಶಾದ್ಯಂತ ತನ್ನ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ಕ್ಲಬ್ ಮಾಡಲು ನಿರ್ದೇಶನವನ್ನು ಕೋರಿದ್ದಾರೆ. ಬಿಜೆಪಿಯ ವಕ್ತಾರರಾಗಿದ್ದ ನೂಪುರ್ ಶರ್ಮಾ ಅವರು ಟಿವಿ ಚರ್ಚೆಯೊಂದರಲ್ಲಿ ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಕಾಮೆಂಟ್ ಮಾಡುವ ಮೂಲಕ ದೇಶಾದ್ಯಂತ ದೊಡ್ಡ ವಿವಾದಕ್ಕೆ ಕಾರಣರಾಗಿದ್ದರು. ಶರ್ಮಾ ಅವರ ಹೇಳಿಕೆಗಳು ದೇಶಾದ್ಯಂತ ಗಲಭೆಗೆ ಕಾರಣವಾಯಿತಲ್ಲದೆ, ಅನೇಕ ಗಲ್ಫ್‌ ದೇಶಗಳು ಭಾರತದ ವಿರುದ್ಧ ಟೀಕೆ ಮಾಡಿದ್ದವು.

ಟೀಕಿಸಿದ್ದ ಸುಪ್ರೀಂ ಕೋರ್ಟ್‌: ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ( J B Pardiwala) ಮತ್ತು ನ್ಯಾಯಮೂರ್ತಿ ಸೂರ್ಯ ಕಾಂತ್  (Justice Surya Kant ) ಅವರ ಸುಪ್ರೀಂ ಕೋರ್ಟ್ (Supreme Court) ಪೀಠವು ಜುಲೈ 1 ರಂದು ಪ್ರವಾದಿ ಮೊಹಮ್ಮದ್ (Prophet Mohammad) ಅವರ ವಿರುದ್ಧ "ಗೊಂದಲಕಾರಿ" ಹೇಳಿಕೆಗಳಿಗಾಗಿ ಶರ್ಮಾ ಅವರನ್ನು ಖಂಡಿಸಿತ್ತು. ಉದಯಪುರದಲ್ಲಿ ಸಂಭವಿಸಿದ "ದುರದೃಷ್ಟಕರ" ಘಟನೆ ಮತ್ತು ಹಿಂಸಾಚಾರಕ್ಕೆ ಅವಳೇ ಹೊಣೆಗಾರಳೆಂದು ನ್ಯಾಯಪೀಠ ಹೇಳಿತ್ತು. ಅವಳ ನಾಲಿಗೆ ಹರಿಬಿಟ್ಟಿದ್ದರಿಂದ "ಇಡೀ ದೇಶಕ್ಕೆ ಬೆಂಕಿ ಹೊತ್ತಿಕೊಳ್ಳಲು ಕಾರಣವಾಯಿತು" ಮತ್ತು "ದೇಶದಲ್ಲಿ ಏನಾಗುತ್ತಿದೆ ಎಂಬುದಕ್ಕೆ ಆಕೆಯೊಬ್ಬರೇ ಕಾರಣ" ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ದೆಹಲಿ ಪೊಲೀಸರಿಗೂ ಛೀಮಾರಿ ಹಾಕಿತ್ತು ಸುಪ್ರೀಂ ಕೋರ್ಟ್‌: ಈ ಹೇಳಿಕೆಗಾಗಿ ತನ್ನ ವಿರುದ್ಧ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳನ್ನು ಒಟ್ಟುಗೂಡಿಸಲು ಆಕೆಯ ಮನವಿಯನ್ನು ಪರಿಗಣಿಸಲು ಪೀಠ ನಿರಾಕರಿಸಿತ್ತು. ಶರ್ಮಾ ಅವರ ಕಾಮೆಂಟ್ ಅನ್ನು ಅಗ್ಗದ ಪ್ರಚಾರ, ರಾಜಕೀಯ ಕಾರಣ ಹಾಗೂ ಕೆಲವು ಕೆಟ್ಟ ಚಟುವಟಿಕೆಗಳಿಗಾಗಿ ಮಾಡಿರುವ ಪ್ರಯತ್ನ ಎಂದು ತಿಳಿಸಿತ್ತು. ಆಕೆಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದ ದೆಹಲಿ ಪೊಲೀಸರನ್ನೂ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತು. ಪೀಠ, ''ಇದುವರೆಗಿನ ತನಿಖೆಯಲ್ಲಿ ಏನಾಗಿದೆ? ದೆಹಲಿ ಪೊಲೀಸರು ಇಲ್ಲಿಯವರೆಗೆ ಏನು ಮಾಡಿದ್ದಾರೆ? ನಮ್ಮ ಬಾಯಿ ತೆರೆಯುವಂತೆ ಮಾಡಬೇಡಿ. ನಿಮಗೋಸ್ಕರ ಅವರು ರೆಡ್‌ ಕಾರ್ಪೆಟ್‌ ಹಾಕಿರಬೇಕು' ಎಂದು ಟೀಕೆ ಮಾಡಿದ್ದರು.

ಸುಪ್ರೀಂ ಕೋರ್ಟ್‌ ಲಕ್ಷ್ಮಣ ರೇಖೆ ದಾಟಿದೆ ಎಂದಿದ್ದ ಮಾಜಿ ನ್ಯಾಯಾಧೀಶರು: ಅತಿದೊಡ್ಡ ಪ್ರಜಾಪ್ರಭುತ್ವದ ನ್ಯಾಯ ವ್ಯವಸ್ಥೆಯಲ್ಲಿ ಅಳಿಸಲಾಗದದಂಥ  ಕಾಮೆಂಟ್‌ಗಳನ್ನು ಮಾಡುವಾಗ ನ್ಯಾಯಾಲಯವು "ಲಕ್ಷ್ಮಣ ರೇಖೆ"ಯನ್ನು ದಾಟಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ತನ್ನ ಅವಲೋಕನಗಳನ್ನು ಹಿಂಪಡೆಯಬೇಕು ಎಂದು ಮಾಜಿ ನ್ಯಾಯಾಧೀಶರು ಮತ್ತು ಅಧಿಕಾರಿಗಳ ಗುಂಪು ಒತ್ತಾಯಿಸಿತ್ತು .15 ಹೈಕೋರ್ಟ್‌ ಮಾಜಿ ನ್ಯಾಯಾಧೀಶರು, 77 ಮಾಜಿ ಅಖಿಲ ಭಾರತ ಸೇವಾ ಅಧಿಕಾರಿಗಳು ಮತ್ತು 25 ಅನುಭವಿಗಳನ್ನು ಒಳಗೊಂಡಿರುವ ಗುಂಪು, ಸುಪ್ರೀಂ ಕೋರ್ಟ್‌ ಮಾಡಿರುವ ಇಂಥ ಕಾಮೆಂಟ್‌ಗಳು ನ್ಯಾಯಾಂಗ ನೀತಿಗೆ ಹೊಂದಿಕೆಯಾಗುವುದಿಲ್ಲ ಮತ್ತು ದೇಶ ಮತ್ತು ಹೊರಗೆ ಖಂಡಿತವಾಗಿ ಬೇರೆ ರೀತಿಯ ಕಲ್ಪನೆಯನ್ನು ಮೂಡಿಸುತ್ತದೆ ಎಂದು ಹೇಳಿದ್ದರು.

 

Follow Us:
Download App:
  • android
  • ios