ದಿಸ್ಪುರ್(ಮಾ.03)‌: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸಮುದ್ರದಲ್ಲಿ ಈಜು, ಪುಷ್‌ ಅಫ್ಸ್‌, ಡ್ಯಾನ್ಸ್‌ ಮೂಲಕ ಗಮನಸೆಳೆಯುತ್ತಿದ್ದರೆ, ಅತ್ತ ಪ್ರಿಯಾಂಕಾ ಗಾಂಧಿ ಅಸ್ಸಾಂನ ಟೀ ಎಸ್ಟೇಟ್‌ ಕಾರ್ಮಿಕರೊಂದಿಗೆ ಕೆಲಸ ಮಾಡುತ್ತಾ ಗಮನಸೆಳೆಯುತ್ತಿದ್ದಾರೆ.

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಸ್ಸಾಂನಲ್ಲಿ ಪ್ರಚಾರಕಾರ‍್ಯದಲ್ಲಿ ತೊಡಗಿರುವ ಕಾಂಗ್ರೆಸ್‌ ಪ್ರಧಾನ ಕಾರ‍್ಯದರ್ಶಿ ಪ್ರಿಯಾಂಕಾ ಗಾಂಧಿ ಮಂಗಳವಾರ ಇಲ್ಲಿನ ವಿಶ್ವನಾಥ್‌ ಟೀ ಗಾರ್ಡನ್‌ಗೆ ತೆರಳಿ, ಅಲ್ಲಿನ ಕಾರ್ಮಿರೊಂದಿಗೆ ಸೇರಿ ಟೀ ಎಲೆಗಳನ್ನು ಬಿಡಿಸಿದರು. ಈ ವೇಳೆ ಅಲ್ಲಿನ ಮಹಿಳಾ ಕಾರ್ಮಿಕರಂತೆಯೇ ಸೀರೆ ಧರಿಸಿ, ಟೀ ಎಲೆಗಳನ್ನು ಹಾಕುವ ಬುಟ್ಟಿಯ ಪಟ್ಟಿಯನ್ನು ತಲೆಗೆ ಸುತ್ತಿಕೊಂಡು ಬುಟ್ಟಿಯನ್ನು ಬ್ಯಾಲೆನ್ಸ್‌ ಮಾಡಿರುವುದು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ.

ಈ ಕುರಿತ ಫೋಟೋಗಳನ್ನು ಸ್ವತಃ ಪ್ರಿಯಾಂಕಾ ಗಾಂಧಿ ಟ್ವೀಟರ್‌ನಲ್ಲಿ ಹಂಚಿಕೊಂಡು, ‘ಟೀ ಗಾರ್ಡನ್‌ ಕಾರ್ಮಿಕರ ಜೀವನ ಸತ್ಯ ಮತ್ತು ಸರಳತೆಯಿಂದ ಕೂಡಿದೆ. ಮತ್ತು ಆ ಕಾರ್ಮಿಕರು ಇಡೀ ದೇಶದ ಆಸ್ತಿ. ಅವರೊಂದಿಗೆ ಕೆಲಸ ಮಾಡುತ್ತಾ ಅವರ ವೃತ್ತಿ, ಕುಟುಂಬ ಮತ್ತು ವೃತ್ತಿಯಲ್ಲಿರುವ ಸವಾಲುಗಳನ್ನು ಅರ್ಥ ಮಾಡಿಕೊಂಡೆ. ಹಾಗೆಯೇ ಅವರು ತೋರಿದ ಪ್ರೀತಿ ಮತ್ತು ಆತ್ಮೀಯತೆಯನ್ನು ಮರೆಯುವುದಿಲ್ಲ’ ಎಂದು ತಮ್ಮ ಅನುಭವದ ಬಗ್ಗೆ ಬರೆದುಕೊಂಡಿದ್ದಾರೆ.