ಲಖನೌ[ಡಿ.29]: : ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯ ವೇಳೆ ಬಂಧಿತರಾಗಿದ ನಿವೃತ್ತ ಐಪಿಎಸ್‌ ಅಧಿಕಾರಿ ಎಸ್‌.ಆರ್‌. ಧರಪುರಿ ಅವರ ನಿವಾಸಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಶನಿವಾರ ದೊಡ್ಡ ಹೈಡ್ರಾಮವೇ ನಡೆದಿದೆ. ತಮ್ಮನ್ನು ತಡೆಯಲು ಬಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪ್ರಿಯಾಂಕಾ ಗಾಂಧಿ ಅಧಿಕಾರಿಯ ಮನೆಗೆ ಭೇಟಿ ನೀಡಿದ್ದಾರೆ. ಇದೇ ವೇಳೆ ತಮ್ಮ ಮೇಲೆ ಮಹಿಳಾ ಪೊಲೀಸ್‌ ಕೈ-ಕೈ ಮಿಲಾಯಿಸಿದ್ದಾರೆ ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ.

ಆಗಿದ್ದೇನು?

ಧರಪುರಿ ಅವರ ನಿವಾಸಕ್ಕೆ ಕಾರಿನಲ್ಲಿ ಹೊರಟಿದ್ದ ಪ್ರಿಯಾಂಕಾ ಗಾಂಧಿ ಅವರ ಕಾರನ್ನು ಪೊಲೀಸರು ಲೋಹಿಯಾ ಪಾರ್ಕ್ ಬಳಿ ತಡೆದು ನಿಲ್ಲಿಸಿದರು. ಈ ವೇಳೆ ಪೊಲೀಸರು ಮತ್ತು ಪ್ರಿಯಾಂಕಾ ಮಧ್ಯೆ ವಾಗ್ವಾದ ಏರ್ಪಟ್ಟಿತ್ತು. ಬಳಿಕ ಕಾರನ್ನು ಅಲ್ಲೇ ನಿಲ್ಲಿಸಿ ಪಕ್ಷದ ಕಾರ್ಯಕರ್ತರೊಬ್ಬ ಸ್ಕೂಟರ್‌ನಲ್ಲಿ ತೆರಳಿದರು. ಆಗಲೂ ಪೊಲೀಸರು ಪ್ರಿಯಾಂಕಾರನ್ನು ತಡೆದರು. ಇದರಿಂದ ಕುಪಿತರಾದ ಪ್ರಿಯಾಂಕಾ, ಕಾಲ್ನಡಿಗೆಯಲ್ಲಿ ತೆರಳಿ ನಿವೃತ್ತ ಅಧಿಕಾರಿಯ ಮನೆಯ ಕುಟುಂಬ ಸದಸ್ಯರನ್ನು ಭೇಟಿಯಾಗಿದ್ದಾರೆ. ಇದರಿಂದಾಗಿ ಕೆಲಹೊತ್ತು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

ಕಾರ್ಯಕರ್ತರ ಜೊತೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ವೇಳೆ ಮಹಿಳಾ ಪೊಲೀಸರು ತಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ. ಮಹಿಳಾ ಪೇದೆಯೊಬ್ಬಳು ತನ್ನನ್ನು ತಳ್ಳಾಡಿದ್ದಾಳೆ ಮತ್ತು ಕುತ್ತಿಗೆಯನ್ನು ಹಿಡಿದು ನೂಕಿದ್ದಾಳೆ ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ.