ಪ್ರಿಯಾಂಕಾ ಗಾಂಧಿ ಬೆಂಗಾವಲು ಪಡೆ ವಾಹನಗಳ ಅಪಘಾತ!
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರ ಬೆಂಗಾವಲು ಪಡೆಯ ನಾಲ್ಕು ವಾಹನಗಳ ಅಪಘಾತ| ಕಾರುಗಳು ಜಖಂ ಆಗಿವೆಯಾದರೂ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ
ಲಕ್ನೋ(ಫೆ.04): ಉತ್ತರ ಪ್ರದೇಶದ ಹಾಪುರ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರ ಬೆಂಗಾವಲು ಪಡೆಯ ನಾಲ್ಕು ವಾಹನಗಳು ಅಪಘಾತಕ್ಕೀಡಾಗಿವೆ. ಈ ಅಪಪಘಾತದಲ್ಲಿ ಕಾರುಗಳು ಜಖಂ ಆಗಿವೆಯಾದರೂ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಜನವರಿ 26 ರಂದು ಗಣರಾಜ್ಯೋತ್ಸವ ದಿನ ನಡೆದ ರೈತರ ಪ್ರತಿಭಟನೆ ವೇಳೆ ಮೃತಪಟ್ಟಿದ್ದ ಯುವಕ ನವ್ರೀತ್ ಸಿಂಗ್ ಕುಟುಂಬ ಸದಸ್ಯರನ್ನು ಭೇಟಿಯಾಗಲು ಪ್ರಿಯಾಂಕಾ ಗಾಂಧಿ ಹಾಗೂ ಅವರ ಬೆಂಬಲಿಗರು ಹಾಪುರ ಜಿಲ್ಲೆಯ ರಾಮಪುರಕ್ಕೆ ತೆರಳಿದ್ದರು. ಆದರೆ ದಾರಿಮಧ್ಯೆ ಬೆಂಗಾವಲು ಪಡೆ ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿವೆ. ಈ ಸಂದರ್ಭದಲ್ಲಿ ಕಾರಿನಲ್ಲಿ ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯ ಘಟಕದ ಮುಖಂಡ ಅಜಯ್ ಕುಮಾರ್ ಲಲ್ಲು ಕೂಡಾ ಇದ್ದರೆಂಬ ಮಾಹಿತಿ ಲಭ್ಯವಾಗಿದೆ.
ಸ್‌ಯುವಿ ಸೇರಿದಂತೆ ನಾಲ್ಕು ವಾಹನಗಳು ಪ್ರಿಯಾಂಕಾ ಅವರನ್ನು ಹಿಂಬಾಲಿಸುತ್ತಿದ್ದವು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಆಗಿರುವ ವಿಡಿಯೋಗಳಿಂದ ತಿಳಿದುಬಂದಿದೆ.
ಇನ್ನು ಅಪಘಾತದ ಬಳಿಕ ಪ್ರಾಣ ಮುಂದುವರೆಸಿದ ಪ್ರಿಯಾಂಕಾ ಗಾಂಧಿ ನವನೀತ್ ಸಿಂಗ್ ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಸೂಚಿಸಿದ್ದಾರೆ.