ನವದೆಹಲಿ(ಜು.02): ಪ್ರಯಾಣಿಕ ರೈಲುಗಳ ಖಾಸಗೀಕರಣ ಪ್ರಕ್ರಿಯೆಗೆ ಬುಧವಾರ ಭಾರತೀಯ ರೈಲ್ವೆ ಚಾಲನೆ ನೀಡಿದೆ. ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. 109 ಜೋಡಿ ಮಾರ್ಗಗಳಲ್ಲಿ ಸಂಚರಿಸುವ ರೈಲುಗಳನ್ನು ಖಾಸಗಿಗೆ ವಹಿಸಲು ರೈಲ್ವೆ ಇಲಾಖೆ ಆಸಕ್ತಿ ತೋರಿದ್ದು, ಅರ್ಹ ಕಂಪನಿಗಳು ಆಸಕ್ತಿ ವ್ಯಕ್ತಪಡಿಸಿ ಅರ್ಜಿ ಹಾಕಬಹುದಾಗಿದೆ. ಇದರಿಂದಾಗಿ ರೈಲ್ವೆಗೆ 30 ಸಾವಿರ ಕೋಟಿ ರು. ಬಂಡವಾಳ ಹರಿದುಬರುವ ನಿರೀಕ್ಷೆಯಿದೆ.

ರೈಲ್ವೆಯಲ್ಲಿ ಖಾಸಗಿ ಬಂಡವಾಳ ಇದೇ ಮೊದಲು. ಕಳೆದ ವರ್ಷ ಐಆರ್‌ಸಿಟಿಸಿ ಲಖನೌ-ದಿಲ್ಲಿ ತೇಜಸ್‌ ಎಕ್ಸ್‌ಪ್ರೆಸ್‌ ನಿರ್ವಹಣೆ ಆರಂಭಿಸಿತ್ತು. ಈ ಮೂಲಕ ರೈಲ್ವೆಯೇತರ ಸಂಸ್ಥೆಯು ಮೊದಲ ಬಾರಿ ರೈಲಿನ ನಿರ್ವಹಣೆ ಆರಂಭಿಸಿದಂತಾಗಿತ್ತು.

ಈ ಯೋಜನೆಯಡಿ ರೈಲು ಬೋಗಿ ಖರೀದಿ, ಇಂಧನ ನಿರ್ವಹಣೆ, ಚಾಲಕ, ಸಿಗ್ನಲ್‌ ಮೊದಲಾದ ವಿಷಯಗಳನ್ನು ರೈಲ್ವೆ ನೋಡಿಕೊಳ್ಳಲಿದೆ. ಮೇಕ್‌ ಇನ್‌ ಇಂಡಿಯಾ ಯೋಜನೆಯಡಿ ಗಂಟೆಗೆ 160 ಕಿ.ಮೀ ವೇಗದಲ್ಲಿ ಸಂಚರಿಸುವ 151 ಹೊಸ ಮಾದರಿಯ ರೈಲುಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗುವುದು. ಗುತ್ತಿಗೆ ಪಡೆದ ಕಂಪನಿಗಳು ಶುಲ್ಕ ಸಂಗ್ರಹ ಸೇರಿ ಇತರೆ ಹಲವು ವಿಷಯಗಳನ್ನು ನಿರ್ವಹಿಸಲಿವೆ. ಒಪ್ಪಂದದ ಅನ್ವಯ ಖಾಸಗಿ ಕಂಪನಿಗಳು ಆದಾಯವನ್ನು ರೈಲ್ವೆ ಜೊತೆ ಹಂಚಿಕೊಳ್ಳಲಿವೆ. ಇಂಥ ಗುತ್ತಿಗೆ 35 ವರ್ಷ ಅವಧಿಗೆ ಒಳಪಟ್ಟಿರುತ್ತದೆ.