ಪ್ರಧಾನಿ ನರೇಂದ್ರ ಮೋದಿ ಮಂಗಳವಾರದಿಂದ 4 ದಿನ ಅಮೆರಿಕ ಮತ್ತು 2 ದಿನ ಈಜಿಪ್ಟ್ ಪ್ರವಾಸ ಕೈಗೊಳ್ಳಲಿದ್ದಾರೆ. ಇದು ಮೋದಿ ಅವರ ಐತಿಹಾಸಿಕ ಪ್ರವಾಸವಾಗಲಿದ್ದು, ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ.
ನವದೆಹಲಿ (ಜೂ.20): ಪ್ರಧಾನಿ ನರೇಂದ್ರ ಮೋದಿ ಮಂಗಳವಾರದಿಂದ 4 ದಿನ ಅಮೆರಿಕ ಮತ್ತು 2 ದಿನ ಈಜಿಪ್ಟ್ ಪ್ರವಾಸ ಕೈಗೊಳ್ಳಲಿದ್ದಾರೆ. ಇದು ಮೋದಿ ಅವರ ಐತಿಹಾಸಿಕ ಪ್ರವಾಸವಾಗಲಿದ್ದು, ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ. ಮೋದಿ ಅವರಿಗೆ ಅಮೆರಿಕ ಸರ್ಕಾರವೇ ಈ ಸಲ ಭೇಟಿಗೆ ಆಹ್ವಾನ ನೀಡಿದ್ದು, ಅಮೆರಿಕದ ಆಹ್ವಾನಿತರಾಗಿ ಅಲ್ಲಿಗೆ ಭೇಟಿ ನೀಡುತ್ತಿರುವ ಭಾರತದ ಎರಡನೇ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಜತೆಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರಿಂದ ಆಹ್ವಾನ ಪಡೆದು ಅಮೆರಿಕಕ್ಕೆ ಭೇಟಿ ನೀಡುತ್ತಿರುವ 3ನೇ ವಿಶ್ವ ನಾಯಕ ಎನ್ನಿಸಿಕೊಳ್ಳಲಿದ್ದಾರೆ.
ಇನ್ನೊಂದೆಡೆ ಅಮೆರಿಕ ಸಂಸತ್ತನ್ನು ಉದ್ದೇಶಿಸಿ 2ನೇ ಸಲ ಭಾಷಣ ಮಾಡಲಿರುವ ಭಾರತದ ಮೊದಲ ಪ್ರಧಾನಿ ಎಂಬ ಕೀರ್ತಿಗೂ ಮೋದಿ ಭಾಜನರಾಗಲಿದ್ದಾರೆ. ಇದು ಪ್ರಧಾನಿಯಾಗಿ ಮೋದಿ ಅಮೆರಿಕಕ್ಕೆ ನೀಡಲಿರುವ 7ನೇ ಭೇಟಿ ಆಗಲಿದೆ. ಈ ಹಿಂದೆ ಮನಮೋಹನ ಸಿಂಗ್ ಅವರು ಭಾರತದ ಪ್ರಧಾನಿಯಾಗಿದ್ದಾಗ ಅಮೆರಿಕದ ಆಹ್ವಾನ ಪಡೆದು ಅಧಿಕೃತ ಭೇಟಿ ನೀಡಿದ್ದರು. ಅಮೆರಿಕದ ಸಂಸತ್ತಿನಲ್ಲೂ ಅವರು ಒಂದು ಸಲ ಭಾಷಣ ಮಾಡಿದ್ದರು. ಅಮೆರಿಕದ ಭೇಟಿ ಬಳಿಕ ಪ್ರಧಾನಿ ಮೋದಿ ಈಜಿಪ್ಟ್‌ಗೆ ಭೇಟಿ ನೀಡಲಿದ್ದು, ಆ ದೇಶಕ್ಕೆ ಭೇಟಿ ನೀಡುತ್ತಿರುವ ಭಾರತದ ಮೊಟ್ಟಮೊದಲ ಪ್ರಧಾನಿ ಎಂಬ ಕಿರೀಟವೂ ಮೋದಿ ಮುಡಿಗೆ ಏರಲಿದೆ. ಮೋದಿಯವರ ಅಮೆರಿಕ ಭೇಟಿ ವೇಳೆ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ರಕ್ಷಣಾ ಸಹಕಾರವೇ ಪ್ರಮುಖ ಕಾರ್ಯಸೂಚಿ ಆಗಲಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ.
ಸುಳ್ಳು ಹೇಳುವುದು, ಅಪಪ್ರಚಾರ ಮಾಡುವುದೇ ಬಿಜೆಪಿ ಜಾಯಮಾನ: ಸಚಿವ ಜಾರ್ಜ್
ಮೋದಿ ಪ್ರವಾಸದಲ್ಲಿ ಏನೇನು?: ಜೂ.21ರಂದು ಅಮೆರಿಕದ ನ್ಯೂಯಾರ್ಕ್ಗೆ ಆಗಮಿಸಲಿರುವ ಪ್ರಧಾನಿ ಮೋದಿ ವಿಶ್ವಸಂಸ್ಥೆಯಲ್ಲಿ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅವರಿಗೆ 180 ದೇಶಗಳ ಪ್ರಮುಖರು ಸಾಥ್ ನೀಡಲಿದ್ದಾರೆ. ಅಂದೇ ರಾತ್ರಿ ವಾಷಿಂಗ್ಟನ್‌ಗೆ ತೆರಳಲಿರುವ ಮೋದಿ ಅವರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಅವರ ಪತ್ನಿ ಜಿಲ್ ಆತ್ಮೀಯ ಔತಣ ಕೂಟ ಆಯೋಜಿಸಿದ್ದಾರೆ.
ಮಾರನೇ ದಿನ ಜೂ.22ರಂದು ಮೋದಿ ಅವರಿಗೆ ಅಮೆರಿಕ ಅಧ್ಯಕ್ಷರ ಪರವಾಗಿ ಸಾಂಪ್ರದಾಯಿಕ ಸ್ವಾಗತ ಕೋರಲಾಗುವುದು. ಜೊತೆಗೆ ಸರ್ಕಾರ ಕಡೆಯಿಂದ ಔತಣ ಕೂಟ ಆಯೋಜಿಸಲಾಗಿದೆ. ಅಂದು ಮೋದಿ ಅಮೆರಿಕ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಮೂಲಕ ಅಮೆರಿಕ ಸಂಸತ್ತಿನಲ್ಲಿ ಮಾತನಾಡುವ ಭಾರತದ 2ನೇ ಪ್ರಧಾನಿ ಎನ್ನಿಸಿಕೊಳ್ಳಲಿದ್ದಾರೆ. ಜೂ.23ರಂದು ಮೋದಿ ಅವರಿಗೆ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಔತಣ ಕೂಟ ಆಯೋಜಿಸಿದ್ದಾರೆ. ಅಂದು ಮೋದಿ ವಿವಿಧ ಕಂಪನಿಗಳ ಸಿಇಒಗಳು, ಉದ್ಯಮಿಗಳು, ಖ್ಯಾತನಾಮರನ್ನು ಭೇಟಿಯಾಗಲಿದ್ದಾರೆ. ಜೊತೆಗೆ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಈಜಿಪ್ಟ್‌ಗೆ ಭಾರತದ ಪ್ರಧಾನಿ ಚೊಚ್ಚಲ ಭೇಟಿ: ಜೂ.24ರಂದು ಈಜಿಪ್ಟ್‌ಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ, ಈ ದೇಶಕ್ಕೆ ತೆರಳುತ್ತಿರುವ ಮೊದಲ ಭಾರತದ ಪ್ರಧಾನಿ ಎನ್ನಿಸಿಕೊಳ್ಳಲಿದ್ದಾರೆ. ಈ ವೇಳೆ ಅವರು ಅಲ್ ಹಕೀಮಿ ಮಸೀದಿಗೆ ಭೇಟಿ ನೀಡಲಿದ್ದಾರೆ. ಬಳಿಕ ಅಧ್ಯಕ್ಷ ಅಬ್ದೆಲ್ ಫತ್ತಾ ಎಲ್ ಸಿಸಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. 25ರಂದು ಭಾರತಕ್ಕೆ ವಾಪಸಾಗಲಿದ್ದಾರೆ.
ರಕ್ಷಣಾ ವಿಷಯ ಪ್ರಧಾನ: ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ, ‘ರಕ್ಷಣಾ ಸಹ-ಉತ್ಪಾದನೆ ಮತ್ತು ಸಹ ಅಭಿವೃದ್ಧಿಯ ಕುರಿತ ಎಲ್ಲಾ ವಿಷಯಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ನಡುವಿನ ಮಾತುಕತೆಯ ಪ್ರಮುಖ ಭಾಗವಾಗಿರಲಿದೆ. ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಪ್ರಮುಖವಾಗಿ ಚರ್ಚಿಸಲಾಗುವುದು. ವ್ಯಾಪಾರ ಮತ್ತು ಹೂಡಿಕೆಯಲ್ಲಿ ಸಹಕಾರವೂ ಚರ್ಚೆಯಲ್ಲಿ ಎರಡನೇ ಪ್ರಮುಖ ವಿಷಯವಾಗಿರಲಿದೆ. ಟೆಲಿಕಾಂ, ಬಾಹ್ಯಾಕಾಶ, ಉತ್ಪಾದನೆ ಮತ್ತು ಹೂಡಿಕೆ ಮೂರನೇ ಪ್ರಮುಖ ಚರ್ಚೆಯ ವಿಷಯವಾಗಿರಲಿದೆ’ ಎಂದರು.
ರಕ್ಷಣಾ ಸಹಕಾರದ ವಿವರವನ್ನು ಕ್ವಾತ್ರಾ ನೀಡಲಿಲ್ಲವಾದರೂ ಅಮೆರಿಕ ನಿರ್ಮಿತ ಡ್ರೋನ್ ಖರೀದಿ ಒಪ್ಪಂದಕ್ಕೆ ಈ ವೇಳೆ ಅಂಕಿತ ಬೀಳಲಿದೆ. ಅಲ್ಲದೆ ಯುದ್ಧವಿಮಾನ ನಿರ್ಮಾಣ ತಂತ್ರಜ್ಞಾನವನ್ನು (ಜೆಟ್ ಎಂಜಿನ್ ಟೆಕ್ನಾಲಜಿ) ಭಾರತದೊಂದಿಗೆ ಹಂಚಿಕೊಳ್ಳುವ ಒಪ್ಪಂದಕ್ಕೂ ಅಂಕಿತ ಬೀಳಲಿದೆ. ಇದು ಯುದ್ಧವಿಮಾನ ನಿರ್ಮಾಣದಲ್ಲಿ ಕ್ರಾಂತಿಕಾರಕವಗಬಹುದು ಎಂದು ಹೇಳಲಾಗಿದೆ.
ಬಿಜೆಪಿ ಮೊದಲು ಎಲ್ಲರ ಖಾತೆಗೆ 15 ಲಕ್ಷ ಹಾಕಿ ನಂತರ ನಮ್ಮ ವಿರುದ್ಧ ಪ್ರತಿಭಟಿಸಲಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ
ಏನೇನು ಕಾರ‍್ಯಕ್ರಮ?
- ಜೂ.21ರಂದು ಅಮೆರಿಕದ ನ್ಯೂಯಾರ್ಕ್ಗೆ ಮೋದಿ ಆಗಮನ
- ಅಂದೇ ವಿಶ್ವಸಂಸ್ಥೆಯಲ್ಲಿ 9ನೇ ಅಂ.ರಾ. ಯೋಗ ದಿನದಲ್ಲಿ ಭಾಗಿ
- ರಾತ್ರಿ ವಾಷಿಂಗ್ಟನ್‌ನಲ್ಲಿ ಮೋದಿಗೆ ಬೈಡೆನ್ ದಂಪತಿಯ ಔತಣ
- ಜೂ.22ರಂದು ಅಮೆರಿಕದ ಅಧ್ಯಕ್ಷರಿಂದ ಸಾಂಪ್ರದಾಯಿಕ ಸ್ವಾಗತ
- ಅದೇ ದಿನ ಪ್ರಧಾನಿಗೆ ಅಮೆರಿಕ ಸರ್ಕಾರದಿಂದ ಅಧಿಕೃತ ಔತಣ
- ಅಂದು ಅಮೆರಿಕದ ಜಂಟಿ ಸಂಸತ್ತನ್ನು ಉದ್ದೇಶಿಸಿ ಮೋದಿ ಭಾಷಣ
- ಜೂ.23ರಂದು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಔತಣ
- ಅಂದು ವಿವಿಧ ಕಂಪನಿಗಳ ಸಿಇಒ, ಉದ್ಯಮಿಗಳ ಜತೆ ಮೋದಿ ಭೇಟಿ
- ಅದೇ ದಿನ ಭಾರತೀಯ ಸಮುದಾಯವನ್ನುದ್ದೇಶಿಸಿ ಮೋದಿ ಭಾಷಣ
