ಮೋದಿ ಸಂಪುಟಕ್ಕೆ ಕರ್ನಾಟಕದ ಸಂಸದರು?: ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ!
* ಇಂದು ಸಂಜೆ ಮೋದಿ ಸಂಪುಟ ವಿಸ್ತರಣೆ?
* ಹೊಸ ಮುಖ, ಟೆಕ್ನೋಕ್ರಾಟ್, ಚುನಾವಣೆ ನಡೆಯುವ ರಾಜ್ಯಗಳಿಗೆ ಆದ್ಯತೆ
* 20 ಹೊಸ ಸಚಿವರ ಸೇರ್ಪಡೆ ಸಂಭವ
* ಹಲವು ಹಾಲಿ ಮಂತ್ರಿಗಳಿಗೆ ಕೊಕ್
ನವದೆಹಲಿ(ಜು.07): ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟದ ವಿಸ್ತರಣೆ/ ಪುನಾರಚನೆ ಕಾರ್ಯಕ್ರಮ ಬುಧವಾರ ಸಂಜೆ 6 ಗಂಟೆಗೆ ನಿಗದಿಯಾಗಿದೆ ಎನ್ನಲಾಗಿದೆ. ಇದಕ್ಕೆ ಪೂರಕವೆಂಬಂತೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಬಿಜೆಪಿ ಮತ್ತು ಎನ್‌ಡಿಎ ಮಿತ್ರಪಕ್ಷಗಳ ಸಂಸದರಿಗೆ ಕೇಂದ್ರದ ಬಿಜೆಪಿ ನಾಯಕರಿಂದ ಕರೆ ಬಂದಿದ್ದು, ಅವರೆಲ್ಲಾ ಮಂಗಳವಾರವೇ ದೆಹಲಿಗೆ ದೌಡಾಯಿಸಿದ್ದಾರೆ. ಇದು 2019ರಲ್ಲಿ 2ನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಲಿರುವ ಮೊದಲ ಸಂಪುಟ ಬದಲಾವಣೆ ಪ್ರಕ್ರಿಯೆಯಾಗಲಿದೆ.
ಕೇಂದ್ರ ಸಂಪುಟದಲ್ಲಿ 81 ಜನರಿಗೆ ಅವಕಾಶವಿದ್ದು, ಹಾಲಿ 52 ಜನರಿಗೆ ಮಾತ್ರ ಅವಕಾಶ ಸಿಕ್ಕಿದೆ. ಜೊತೆಗೆ ಬುಧವಾರ ಪ್ರಕ್ರಿಯೆಯಲ್ಲಿ ಕೆಲ ಸಚಿವರನ್ನು ಕೈಬಿಡುವ ಸಾಧ್ಯತೆ ಇದೆ. ಹೀಗಾಗಿ ಅದರಿಂದಲೂ ಸೃಷ್ಟಿಯಾಗುವ ಸ್ಥಾನಗಳನ್ನು ಸೇರಿಸಿ ಕನಿಷ್ಠ 25 ಜನರಿಗೆ ಕೇಂದ್ರ ಸಂಪುಟದಲ್ಲಿ ಅವಕಾಶ ನೀಡಲಾಗುವುದು.
ಈ ಬಾರಿ ಯುವಕರು, ತಾಂತ್ರಿಕ, ವಿಷಯವಾರು ಪರಿಣತಿ ಹೊಂದಿರುವವರಿಗೆ ಹೆಚ್ಚಿನ ಮನ್ನಣೆ ಸಿಗಲಿದೆ. ಯುಪಿ ಸೇರಿದಂತೆ ಶೀಘ್ರ ಚುನಾವಣೆ ನಡೆಯಲಿರುವ ರಾಜ್ಯಗಳನ್ನು ಗಮನದಲ್ಲಿಟ್ಟುಕೊಳ್ಳಲಾಗುವುದು. ಮಹಿಳೆಯರಿಗೂ ಇನ್ನಷ್ಟುಸ್ಥಾನ ಸಿಗಲಿದೆ. ಅಲ್ಲದೆ ಜಾತಿ ಲೆಕ್ಕಾಚಾರವನ್ನೂ ಪರಿಗಣಿಸಿ ವಿಸ್ತರಣೆ, ಪುನಾರಚನೆ ನಡೆಸುವ ಸಾಧ್ಯತೆ ದಟ್ಟವಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಬಾರಿಯ ವಿಸ್ತರಣೆಯಲ್ಲಿ ಕರ್ನಾಟಕಕ್ಕೆ 2-3 ಸ್ಥಾನದ ನಿರೀಕ್ಷೆ ಇದೆ.
ಮೋದಿ- ಸಂತೋಷ್ ಚರ್ಚೆ:
ಪುನಾರಚನೆ ಸಂಬಂಧ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆ ಮೋದಿ ಅವರು ಸೋಮವಾರವೇ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಮನವೊಲಿಕೆ:
ಸಂಪುಟ ವಿಸ್ತರಣೆ ವೇಳೆ ಒಂದಕ್ಕಿಂತ ಹೆಚ್ಚು ಖಾತೆಗಳ ಹೊಣೆ ಹೊತ್ತ ಕೆಲವು ಸಚಿವರ ಖಾತೆಗಳು ಬದಲಾವಣೆ ಆಗಲಿದೆ. ಇನ್ನು ಸಚಿವ ಸ್ಥಾನ ಕಳೆದುಕೊಳ್ಳಲಿರುವ ಕೆಲವು ಸಚಿವರ ಜತೆ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಸಭೆ ನಡೆಸಿ ಮನವೊಲಿಕೆ ಯತ್ನ ಮಾಡಲಿದ್ದಾರೆ ಎನ್ನಾಗಿದೆ.
ಮಿತ್ರರಿಗೂ ಸ್ಥಾನ:
ಈ ಬಾರಿ ಬಿಹಾರದ ಜೆಡಿಯು, ಎಲ್‌ಜೆಪಿ, ಅಪ್ನಾದಳ್ ಪಕ್ಷಕ್ಕೂ ಸ್ಥಾನ ಸಿಗುವುದು ಖಚಿತವಾಗಿದೆ.
ಸಂಭಾವ್ಯ ಸಚಿವರು
- ಜ್ಯೋತಿರಾದಿತ್ಯ ಸಿಂಧಿಯಾ
- ಸರಬಾನಂದ ಸೋನೊವಾಲ್
- ಸುಶೀಲ್ ಮೋದಿ
- ಜಿ.ವಿ.ಎಲ್. ನರಸಿಂಹರಾವ್
- ಸುಧಾಂಶು ತ್ರಿವೇದಿ
- ಭೂಪೇಂದರ್ ಯಾದವ್
- ಅನಿಲ್ ಬುಲಾನಿ
- ಅನುಪ್ರಿಯಾ ಪಟೇಲ್
- ವರುಣ್ ಗಾಂಧಿ
- ನಾರಾಯಣ ರಾಣೆ
- ಪಂಕಜ್ ಚೌಧರಿ
- ರೀಟಾ ಬಹುಗುಣ ಜೋಶಿ
- ಆರ್‌ಸಿಪಿ ಸಿನ್ಹಾ
- ಲಲ್ಲನ್ ಸಿಂಗ್
- ಬೈಜಯಂತ ‘ಜೈ’ ಪಾಂಡಾ
- ರಾಮಶಂಕರ ಕಠೇರಿಯಾ
- ಪಶುಪತಿ ಪಾರಸ್
ಕರ್ನಾಟಕದಿಂದ ಯಾರಿಗೆ ಸ್ಥಾನ?
- ದಲಿತ ಸಂಸದರ ಪೈಕಿ ಒಬ್ಬರಿಗೆ ಸಚಿವ ಸ್ಥಾನ ನಿಚ್ಚಳ
- ನಾರಾಯಣಸ್ವಾಮಿಗೆ ಅವಕಾಶ ಸಾಧ್ಯತೆ
- ಉಮೇಶ್ ಜಾಧವ್, ಜಿಗಜಿಣಗಿ ಹೆಸರೂ ಪ್ರಸ್ತಾಪ
- ಅಂಗಡಿಯಿಂದ ತೆರವಾದ ಲಿಂಗಾಯತ ಸ್ಥಾನ ಯಾರಿಗೆ ಎಂಬ ಕುತೂಹಲ
- ಗದ್ದಿಗೌಡರ್, ಉದಾಸಿ, ಖೂಬಾ ಹೆಸರು ಚರ್ಚೆಯಲ್ಲಿ
- ಡಿವಿಎಸ್ ಕೈಬಿಟ್ಟರೆ ಶೋಭಾ ಅಥವಾ ಪ್ರತಾಪ್ ಸಿಂಹಗೆ ಛಾನ್ಸ್?
- ಬಿಎಸ್‌ವೈ ಪುತ್ರ ಬಿ.ವೈ.ರಾಘವೇಂದ್ರಗೆ ಸಚಿವ ಸ್ಥಾನ ಬಗ್ಗೆಯೂ ಚರ್ಚೆ