ನವದೆಹಲಿ(ಡಿ.10): ಭಾರತದ ಪ್ರಧಾನಿಗಳು ವಿದೇಶ ಪ್ರವಾಸದ ಕುರಿತ ಮಾಹಿತಿ ನೀಡುವುದು ಭದ್ರತಾ ಲೋಪವಾಗಲಿದೆ. ಹೀಗಾಗಿ ಅಂಥ ಮಾಹಿತಿಯನ್ನು ಆರ್‌ಟಿಐ ಕಾಯ್ದೆಯಡಿ ನೀಡಲಾಗದು ಎಂದು ಪ್ರಧಾನಿಗಳ ದೇಶಿ ಮತ್ತು ವಿದೇಶಿ ಪ್ರವಾಸದ ಹೊಣೆ ಹೊತ್ತಿರುವ ಭಾರತೀಯ ವಾಯುಪಡೆ ದೆಹಲಿ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಕಮಾಡೋರ್‌ ಲೋಕೇಶ್‌ ಬಾತ್ರಾ ಅವರು ಸಲ್ಲಿಸಿದ್ದ ಅರ್ಜಿಯ ಅನ್ವಯ ವಾಯುಪಡೆಗೆ ಕೆಲ ಸಮಯದ ಹಿಂದೆ ನೋಟಿಸ್‌ ಜಾರಿ ಮಾಡಿದ್ದ ಕೇಂದ್ರ ಮಾಹಿತಿ ಹಕ್ಕು ಆಯೋಗ, ಮಾಜಿ ಪ್ರಧಾನಿ ಮನಮೋಹನ್‌ಸಿಂಗ್‌ ಮತ್ತು ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರ ಎಲ್ಲಾ ವಿದೇಶ ಪ್ರವಾಸಗಳ ಅಧಿಕೃತ ಮಾಹಿತಿ ನೀಡುವಂತೆ ಸೂಚಿಸಿತ್ತು.

ಇದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ ಮೊರೆ ಹೋಗಿರುವ ವಾಯುಪಡೆ, ‘ಪ್ರಧಾನಿಯವರು ವಿದೇಶ ಪ್ರವಾಸ ಕೈಗೊಳ್ಳುವ ವೇಳೆ ಅವರ ಸುರಕ್ಷತೆಗಾಗಿ ಅವರ ಜೊತೆ ಎಷ್ಟುಮಂದಿ ಎಸ್‌ಪಿಜಿ ಸಿಬ್ಬಂದಿ ಇರಲಿದ್ದಾರೆ? ಮತ್ತು ಅವರ ಹೆಸರುಗಳೇನು? ಎಂಬಂಥ ಮಾಹಿತಿಗಳನ್ನು ಆರ್‌ಟಿಐಯಡಿ ಕೋರಲಾಗಿದ್ದು, ಈ ಮಾಹಿತಿಗಳನ್ನು ಬಹಿರಂಗಪಡಿಸಿದ್ದಲ್ಲಿ ಭಾರತದ ಸಾರ್ವಭೌಮತ್ವ ಮತ್ತು ಭದ್ರತೆ, ಸುರಕ್ಷಿತ, ತಂತ್ರಗಾರಿಕೆ, ವೈಜ್ಞಾನಿಕ ಅಥವಾ ಆರ್ಥಿಕ ಹಿತಾಸಕ್ತಿ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಇಂಥ ಸೂಕ್ಷ್ಮ ಮಾಹಿತಿಗಳನ್ನು ಬಹಿರಂಗಪಡಿಸಲಾಗದು’ ಎಂದು ಸ್ಪಷ್ಟಪಡಿಸಿದೆ.