* ಪಾದಯಾತ್ರೆ, ಗ್ರಾಮವಾಸ್ತವ್ಯದ ಮೂಲಕ ಜನರಲ್ಲಿ ಅರಿವು ಕಾರ್ಯಕ್ರಮ* ಬೆಲೆ ಏರಿಕೆ: ಇಂದಿನಿಂದ 15 ದಿನ ಕಾಂಗ್ರೆಸ್‌ನ ಜಾಗೃತಿ ಅಭಿಯಾನ* ಅಭಿಯಾನಕ್ಕಾಗಿ ಟೋಲ್‌ಫ್ರೀ ಫೋನ್‌ ಸಂಖ್ಯೆ ಬಿಡುಗಡೆ ಮಾಡಿದ ಕಾಂಗ್ರೆಸ್‌

ನವದೆಹಲಿ(ನ.14): ತೈಲೋತ್ಪನ್ನ, ದಿನಬಳಕೆ ವಸ್ತುಗಳ ಬೆಲೆ ಏರಿಕೆ (Price Hike) ವಿಷಯ ಹಾಗೂ ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಭಾನುವಾರದಿಂದ 15 ದಿನಗಳ ಜನಜಾಗೃತಿ ಅಭಿಯಾನ (Jan jagaran) ಮತ್ತು ಪಾದಯಾತ್ರೆಯನ್ನು ದೇಶಾದ್ಯಂತ ಕಾಂಗ್ರೆಸ್‌ (Congress) ನಡೆಸಲಿದೆ.

ನ.14ರಿಂದ ನ.29ರವರೆಗೆ ದೇಶಾದ್ಯಂತ ನಡೆಸಲಾಗುವುದು. ಈ ಸಮಯದಲ್ಲಿ ಕಾಂಗ್ರೆಸ್‌ ನಾಯಕರು ಪಾದಯಾತ್ರೆ ಕೈಗೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ. ಅಭಿಯಾನದಲ್ಲಿ ಪಾಲ್ಗೊಳ್ಳಲು ಜನರಿಗಾಗಿ 1800212000011 ಟೋಲ್‌ ಫ್ರೀ ನಂಬರನ್ನು ಬಿಡುಗಡೆ ಮಾಡಲಾಗಿದೆ. ಈ ಅಭಿಯಾನಕ್ಕಾಗಿಯೇ ಪಕ್ಷದ ಹಾಡನ್ನು ಬಿಡುಗಡೆ ಮಾಡಲಾಗಿದೆ ಎಂದು ಕಾಂಗ್ರೆಸ್‌ ಪಕ್ಷದ ಪ್ರಕಟಣೆ ತಿಳಿಸಿದೆ.

ಕಾಂಗ್ರೆಸ್‌ ಪಕ್ಷ ನಡೆಸುತ್ತಿರುವ ಈ ಜನಜಾಗೃತಿ ಅಭಿಯಾನ ಬಿಜೆಪಿ ಆಡಳಿತಕ್ಕೆ ಕೊನೆ ಮೊಳೆ ಹೊಡೆಯಲಿದೆ. ಸರ್ಕಾರ ಬೆಲೆ ಏರಿಕೆ ನೀತಿಯಿಂದ ಜನರಿಗೆ ಬಹಳಷ್ಟುತೊಂದರೆಯಾಗಿದೆ. ಈ ನಂಬರ್‌ಗೆ ಮಿಸ್ಡ್‌ ಕಾಲ್‌ ನೀಡಿದರೆ, ಜನರು ಎಸ್‌ಎಂಎಸ್‌ನ್ನು ಪಡೆದುಕೊಳ್ಳಲಿದ್ದಾರೆ. ಆ ಸಂದೇಶದೊಂದಿಗೆ ಲಗತ್ತಿಸಲಾಗಿರುವ ಡಿಜಿಟಲ್‌ ಫಾಮ್‌ರ್‍ನ್ನು ತುಂಬಿ ಕಳುಹಿಸಬಹುದು ಎಂದು ಕಾಂಗ್ರೆಸ್‌ ಸಾಮಾಜಿಕ ಜಾಲತಾಣದ ಮುಖ್ಯಸ್ಥ ರೋಹನ್‌ ಗುಪ್ತಾ ಹೇಳಿದ್ದಾರೆ.

‘ಅಭಿಯಾನದ ಭಾಗವಾಗಿ ಪಕ್ಷದ ಕಾರ್ಯಕರ್ತರು ದೇಶಾದ್ಯಂತ ಹಳ್ಳಿಗಳಿಗೆ, ಪಟ್ಟಣಗಳಿಗೆ ಪಾದಯಾತ್ರೆ ಕೈಗೊಳ್ಳಲಿದ್ದಾರೆ, ಪ್ರತಿಭಟನೆ ನಡೆಸಲಿದ್ದಾರೆ ಮತ್ತು ಗುಂಪು ಸಭೆಗಳನ್ನು ಆಯೋಜಿಸಲಿದ್ದಾರೆ, ಗ್ರಾಮ ವಾಸ್ತವ್ಯಗಳನ್ನು ಮಾಡಲಿದ್ದಾರೆ. ಈ ಪಾದಯಾತ್ರೆಗಳು ನಿತ್ಯವೂ ಪ್ರಭಾತ ಪೇರಿ ಮತ್ತು ಶ್ರಮದಾನದೊಂದಿಗೆ ಆರಂಭವಾಗಲಿವೆ. ಕಾರ್ಯಕರ್ತರು ಸಣ್ಣ ಸಣ್ಣ ಗುಂಪುಗಳಾಗಿ ತೆರಳಿ, ಜನರಿಗೆ ಕೇಂದ್ರ ಸರ್ಕಾರದ ಅವೈಜ್ಞಾನಿಕ ನೀತಿಗಳಿಂದಾಗಿ ಉಂಟಾಗಿರುವ ಬೆಲೆ ಏರಿಕೆ, ಹಣದುಬ್ಬರ ಸಮಸ್ಯೆಗೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಿದ್ದಾರೆ’ ಎಂದು ತಿಳಿಸಿದ್ದಾರೆ.

ಯುಪಿಎದ 10 ವರ್ಷಗಳ ಆಡಳಿತದಲ್ಲಿ ನಾವು 27 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲೆತ್ತಿದ್ದವು. ಆದರೆ ಇದೀಗ ಬಿಜೆಪಿ ಆಡಳಿತದಲ್ಲಿ ಕೇವಲ ಕೋವಿಡ್‌ ಅವಧಿಯಲ್ಲೇ 14 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಎಲ್‌ಪಿಜಿ ಬೆಲೆ ಶೇ.50ರಷ್ಟುಏರಿಕೆ ಕಂಡು 1000 ರು.ಗೆ ತಲುಪಿದೆ. ಕಳೆದ 18 ತಿಂಗಳಲ್ಲಿ ಪೆಟ್ರೋಲ್‌ ಬೆಲೆ ಲೀ.ಗೆ 35 ರು. ಮತ್ತು 25 ರು.ನಷ್ಟುಹೆಚ್ಚಳವಾಗಿದೆ. ಉದ್ಯೋಗಿಗಳ ವೇತನ ಕಡಿಮೆಯಾಗಿದೆ ಈ ಎಲ್ಲಾ ವಿಷಯಗಳ ಬಗ್ಗೆ ಬಗ್ಗೆ ಪಕ್ಷದ ಕಾರ್ಯಕರ್ತರು ಜನರಿಗೆ ಅರಿವು ಮೂಡಿಸಲಿದ್ದಾರೆ ಎಂದು ವೇಣುಗೋಪಾಲ್‌ ತಿಳಿಸಿದರು.

ಈ ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ಬಿಜೆಪಿ ಜನರಿಗೆ ಕಿರುಕುಳ ನೀಡುವ ಅಭಿಯಾನವನ್ನು ನಡೆಸುತ್ತಿದೆ. ಕಾಂಗ್ರೆಸ್‌ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನ ನಡೆಸಲಿದೆ. ಸರ್ಕಾರ ಮಾಡಿರುವ ಎಲ್ಲಾ ಅನ್ಯಾಯಗಳಿಗೆ ನ್ಯಾಯ ಬಯಸುತ್ತೇವೆ’ ಎಂದು ಹೇಳಿದ್ದಾರೆ.