ಕಳೆದ ಫೆ.13ರಿಂದ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏಷ್ಯಾದ ಅತಿದೊಡ್ಡ ಏರ್‌ ಶೋ ‘ಏರೋ ಇಂಡಿಯಾ’ 14ನೇ ಆವೃತ್ತಿಗೆ ಇಂದು ತೆರೆ ಬೀಳಲಿದ್ದು, ಮುಂದಿನ ಏರ್‌ಶೋ 2025ರ ಫೆಬ್ರವರಿಯಲ್ಲಿ ನಡೆಯಲಿದೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಳೆದ ಫೆ.13ರಿಂದ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏಷ್ಯಾದ ಅತಿದೊಡ್ಡ ಏರ್‌ ಶೋ ‘ಏರೋ ಇಂಡಿಯಾ’ 14ನೇ ಆವೃತ್ತಿಗೆ ಇಂದು ತೆರೆ ಬೀಳಲಿದ್ದು, ಮುಂದಿನ ಏರ್‌ಶೋ 2025ರ ಫೆಬ್ರವರಿಯಲ್ಲಿ ನಡೆಯಲಿದೆ. ಕೊನೆಯ ದಿನವಾದ ಇಂದು ಕೂಡ ಸಾರ್ವಜನಿಕರಿಗೆ ಪ್ರವೇಶವಕಾಶ ಇರಲಿದೆ. ವೈಮಾನಿಕ ಪ್ರದರ್ಶನ, ಒಡಂಬಡಿಕೆ ಸೇರಿ ರಕ್ಷಣಾ ಸಚಿವಾಲಯದ ಹಲವು ಮಹತ್ವದ ಕಾರ್ಯಚಟುವಟಿಕೆಗಳು ನಾಲ್ಕು ದಿನಗಳಲ್ಲಿ ನಡೆದಿವೆ. ಪಾಸ್‌, ಟಿಕೆಟ್‌ ಹೊಂದಿರುವ ಸಾರ್ವಜನಿಕರು ಬೆಳಗ್ಗೆ ಮತ್ತು ಮಧ್ಯಾಹ್ನ ವಿಮಾನಗಳ ಹಾರಾಟದ ಪ್ರದರ್ಶನವನ್ನು ವೀಕ್ಷಿಸಬಹುದು. ಜತೆಗೆ ಪ್ರದರ್ಶನ ಮಳಿಗೆಗಳನ್ನೂ ವೀಕ್ಷಿಸಬಹುದು. ಸಾಮಾನ್ಯ ಜನತೆ ಬೆಂಗಳೂರಲ್ಲಿ ಇನ್ನು ಸೂರ್ಯಕಿರಣ, ಸಾರಂಗದ ಝಲಕ್‌ ವೀಕ್ಷಿಸಲು ಎರಡು ವರ್ಷ ಕಾಯಬೇಕಿದೆ.

2 ಲಕ್ಷಕ್ಕೂ ಅಧಿಕ ಜನ

ಗುರುವಾರ 2 ಲಕ್ಷಕ್ಕೂ ಹೆಚ್ಚಿನ ಜನ ವಾಯುನೆಲೆಯಲ್ಲಿ ಏರ್‌ ಶೋ ವೀಕ್ಷಿಸಿರುವುದಾಗಿ ರಕ್ಷಣಾ ಇಲಾಖೆ ಡಿಇಒ ಅಚಲ್‌ ಮಲ್ಹೋತ್ರಾ (DEO Achal Malhotra)ತಿಳಿಸಿದ್ದಾರೆ. ಸಾರ್ವಜನಿಕರಿಗೆ ಪ್ರವೇಶವಕಾಶವಿದ್ದ ಹಿನ್ನೆಲೆಯಲ್ಲಿ ಗುರುವಾರ ವಾಯುನೆಲೆಗೆ ಜನ ಸಾಗರ ಹರಿದುಬಂದಿತ್ತು. ಬೆಳಗ್ಗೆ ಹಾಗೂ ಮಧ್ಯಾಹ್ನದ ಪ್ರದರ್ಶವನ್ನು ಜನ ವೀಕ್ಷಿಸಿದ್ದಾರೆ. ವಿವಿಧ ಕೆಟಗರಿಯಲ್ಲಿ ಟಿಕೆಟ್‌ ನೀಡಲಾಗಿತ್ತು. ಪ್ರದರ್ಶನ ಮಳಿಗೆ, ವಿದ್ಯಾರ್ಥಿಗಳು, ವಿವಿಧ ದೇಶದ ಪ್ರತಿನಿಧಿಗಳು, ಸೇನಾ ಸಿಬ್ಬಂದಿ ಕುಟುಂಬಸ್ಥರು ಸೇರಿ 2 ಲಕ್ಷ ಜನ ವೈಮಾನಿಕ ಪ್ರದರ್ಶನಕ್ಕೆ ಸಾಕ್ಷಿಯಾದರು.

ಅಮೆರಿಕ ಬ್ಯಾಂಡ್‌ಗೆ ಫಿದಾ

ಅಮೆರಿಕದ ವಾಯುಪಡೆಯ (US Air Force) ಏಳು ಸದಸ್ಯರ ಬ್ಯಾಂಡ್‌ 'ಫೈನಲ್‌ ಅಪ್ರೋಚ್‌' (Final Approach)ಏರೋ ಇಂಡಿಯಾದಲ್ಲಿ ಸಾರ್ವಜನಿಕರಿಗಾಗಿ ಸಂಗೀತ ಕಾರ್ಯಕ್ರಮ ನೀಡಿತು. ವೇದಿಕೆಯೆದುರು ಸೇರಿದ ನೂರಾರು ಜನ ವೆಸ್ಟ್ರನ್‌ ಮ್ಯೂಸಿಕ್‌ಗೆ ಮನಸೋತು ಕುಣಿದು ಕುಪ್ಪಳಿಸಿದರು. ಶಾರುಕ್‌ ಖಾನ್‌ 'ಕಲ್‌ ಹೋ ನ ಹೋ' ತುಣಕನ್ನು ಹಾಡಿದ ಬ್ಯಾಂಡ್‌ ಸದಸ್ಯರು ರಂಜಿಸಿದರು.

ವಾಯುನೆಲೆ ಸೇನಾ ಕಲ್ಯಾಣ ಸಂಘಗಳ (Army Welfare Associations)ಸ್ಟಾಲ್‌ಗಳಲ್ಲಿದ್ದ ಬಗೆಬಗೆಯ ವಸ್ತುಗಳನ್ನು ಕೊಳ್ಳಲು ಜನ ಮುಗಿಬಿದ್ದಿದ್ದರು. ಸೇನೆಯ ಜರ್‌ಕಿನ್‌, ಕ್ಯಾಪ್‌, ಬ್ಯಾಡ್ಜ್‌, ಟೀ ಶರ್ಚ್‌, ಮಕ್ಕಳ ಆಟಿಕೆ ವಿಮಾನ, ಮನೆಯ ಶೋಕೆಸ್‌ನಲ್ಲಿ ಇಡುವ ಮಾಡೆಲ್‌ಗಳನ್ನು ಜನ ಇಷ್ಟಪಟ್ಟು ಖರೀದಿಸಿದರು. ಸೇನಾ ಮಹಿಳಾ ಸಂಘಗಳು ತಯಾರಿಸಿದ್ದ ಸಾಂಬಾರ್‌ ಪದಾರ್ಥಗಳಿಗೂ ಹೆಚ್ಚಿನ ಬೇಡಿಕೆ ಇತ್ತು. ಚರ್ಮದ ಹಣದ ಹುಂಡಿ, ಕಿವಿಯೋಲೆ, ಬಳೆ, ಮಹಿಳೆಯರ ಉಡುಪುಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ಜರ್‌ಕಿನ್‌ಗೆ 3 ಸಾವಿರ, ಬ್ಯಾಗ್‌ಗೆ .600-800, ಮಾಡೆಲ್‌ಗಳಿಗೆ .600-900 ರವರೆಗೆ ಬೆಲೆಯಿದೆ.

ಗ್ರಿಪೆನ್‌-ಇ ಸೆಲ್ಫಿ
ಸಾಬ್‌ ನಿರ್ಮಿತ ಗ್ರಿಪೆನ್‌-ಇ ವಿಮಾನದ ಕಾಕ್‌ಪಿಟ್‌ನಲ್ಲಿ ಕುಳಿತು ಸೆಲ್ಫಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಜನತೆ ಉದ್ದನೆಯ ಸಾಲುಗಟ್ಟಿನಿಂತು ವಿಮಾನದಲ್ಲಿ ಕುಳಿತು ಫೋಟೋ ತೆಗೆಸಿಕೊಂಡರು. ಇವುಗಳ ಜೊತೆಗೆ ಇಂಡಿಯನ್‌ ಪೆವಿಲಿಯನ್‌ನಲ್ಲಿದ್ದ ಬ್ರಹ್ಮೋಸ್‌, ಎಚ್‌ಎಲ್‌ ಮಳಿಗೆಯಲ್ಲಿದ್ದ ತೇಜಸ್‌, ಡಿಆರ್‌ಡಿಒ ಮಳಿಗೆಯಲ್ಲಿದ್ದ ಕಾಪ್ಟರ್‌ಗಳ ಎದುರು ನಿಂತು ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.

Airshow: ಕನ್ನಡದಲ್ಲಿ ವೀಕ್ಷಕ ವಿವರಣೆ ನೀಡಿ ಗಮನಸೆಳೆದ ವಾಯುಸೇನೆಯ ಐಶ್ವರ್ಯ, ಗೋಕುಲ್‌ ವಾಸು

ಟ್ರಾಫಿಕ್‌ ಜಾಮ್‌
ವೈಮಾನಿಕ ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಪ್ರವೇಶಾಕಾಶವಿದ್ದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಸೇರಿದಂತೆ ಯಲಹಂಕದ ವಾಯುನೆಲೆ ಸಂಪರ್ಕಿಸುವ ಬಹುತೇಕ ಎಲ್ಲ ರಸ್ತೆಗಳಲ್ಲಿ ಗುರುವಾರ ಬೆಳಗ್ಗೆ ಮತ್ತು ಸಂಜೆ ವೇಳೆ ಸಂಚಾರ ದಟ್ಟಣೆ ಉಂಟಾಯಿತು. ತುರ್ತಾಗಿ ತೆರಳಬೇಕಿದ್ದವರು ತೊಂದರೆಗೆ ಸಿಲುಕಿದವರು. ಶುಕ್ರವಾರ ಕೂಡ ಇದೇ ಸಮಸ್ಯೆ ಉಂಟಾಗುವ ನಿರೀಕ್ಷೆಯಿದೆ.