* ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು* ದೇವೇಗೌಡರ ಬೆಂಬಲ ಕೇಳಿದ ದ್ರೌಪದಿ ಮುರ್ಮು* ಬೆಂಬಲ ಕೊಟ್ಟಿರುವ ಬಿಎಸ್‌ಪಿ ನಾಯಕಿ ಮಾಯಾವತಿ ಜೊತೆ ಮಾತು

ನವದೆಹಲಿ(ಜೂ.28): ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಸೋಮವಾರ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಆವರಿಗೆ ದೂರವಾಣಿ ಕರೆ ಮಾಡಿ, ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲ ಕೋರಿದರು.

ಇದೇ ವೇಳೆ, ಈಗಾಗಲೇ ತಮಗೆ ಬೆಂಬಲ ಘೋಷಿಸಿರುವ ಬಿಎಸ್‌ಪಿ ನಾಯಕಿ ಮಾಯಾವತಿ ಅವರಿಗೂ ಫೋನ್‌ ಮಾಡಿದರು ಎಂದು ಮೂಲಗಳು ಹೇಳಿವೆ.

ಇತ್ತೀಚೆಗೆ ದೇವೇಗೌಡರು, ‘ಮುರ್ಮು ಉತ್ತಮ ಅಭ್ಯರ್ಥಿ. ರಾಜ್ಯಪಾಲೆಯಾಗಿ ನಿಷ್ಪಕ್ಷಪಾತ ಕೆಲಸ ಮಾಡಿದ್ದರು. ಆದಿವಾಸಿ ಸಮುದಾಯದವರಾದ ಅವರು ಆಡಳಿತದಲ್ಲೂ ನಿಪುಣೆ’ ಎಂದು ಪ್ರಶಂಸಿಸಿದ್ದರು ಎಂಬುದು ಇಲ್ಲಿ ಗಮನಾರ್ಹ.

ಈ ಮುನ್ನ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಕೂಡ ಗೌಡರಿಗೆ ಫೋನ್‌ ಮಾಡಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ಯಾಚಿಸಿದ್ದರು.

ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಹುಟ್ಟೂರಿಗೆ ಕೊನೆಗೂ ಕರೆಂಟ್‌

ಎನ್‌ಡಿಎದ ರಾಷ್ಟ್ರಪತಿ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ಅವರ ಹುಟ್ಟೂರಾದ ಒಡಿಶಾದ ಉಪರ್‌ಬೇಡಾಗೆ ಕೊನೆಗೂ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಸ್ಥಳೀಯ ಜನರು ದಶಕಗಳಿಂದ ಈ ಬಗ್ಗೆ ಬೇಡಿಕೆ ಇಟ್ಟಿದ್ದರೂ ಸ್ಥಳೀಯ ಸಂಸದರು, ಶಾಸಕರು ಸ್ಪಂದಿಸಿರಲಿಲ್ಲ. ಆದರೆ ಇದೀಗ ಮುರ್ಮು ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾಗುತ್ತಲೇ, ಸ್ವತಃ ಒಡಿಶಾ ಸರ್ಕಾರವೇ ಎಚ್ಚೆತೆು್ತಕೊಂಡು ಉಪರ್‌ಬೇಡಾದ ಎಲ್ಲಾ ಮನೆಗಳಿಗೂ ಕೆಲವೇ ದಿನಗಳಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸಿಕೊಟ್ಟಿದೆ. ಹೀಗಾಗಿ ಗ್ರಾಮಸ್ಥರು ಸಂತಸಗೊಂಡಿದ್ದಾರೆ.

ದ್ರೌಪದಿ ಅವರ ಹುಟ್ಟೂರಾದ ಉಪರ್‌ಬೇಡಾ ಎರಡು ಭಾಗಗಳನ್ನು ಒಳಗೊಂಡಿದೆ. ಒಂದು ಬಡ್‌ಶಾಹಿ ಮತ್ತು ದುಂಗರ್‌ಶಾಹಿ. ಈ ಪೈಕಿ ಬಡ್‌ಶಾಹಿಗೆ ಈಗಾಗಲೇ ವಿದ್ಯುತ್‌ ಸಂಪರ್ಕ ಇತ್ತು. ಆದರೆ 14 ಮನೆಗಳು ಇರುವ ದುಂಗರ್‌ಶಾಹಿಗೆ ಇದುವರೆಗೂ ವಿದ್ಯುತ್‌ ಸಂಪರ್ಕ ಸಿಕ್ಕಿರಲಿಲ್ಲ. ಈ ಊರಿನಲ್ಲಿ ಸ್ವತಃ ದ್ರೌಪದಿ ಅವರ ಸೋದರ ಸಂಬಂಧಿ ಬಿರಂಚಿ ನಾರಾಯಣ್‌ ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸ ಮಾಡುತ್ತಿದ್ದಾರೆ. ಅವರು ಸೇರಿದಂತೆ ಗ್ರಾಮಸ್ಥರು ಹಲವು ಮನವಿ ಕೊಟ್ಟರೂ ಅಧಿಕಾರಿಗಳು ಸ್ಪಂದಿಸಿರಲಿಲ್ಲ.

ಆದರೆ ಇದೀಗ ದಿಢೀರನೆ ಗ್ರಾಮಕ್ಕೆ ಭೇಟಿ ನೀಡಿರುವ ಅಧಿಕಾರಿಗಳ ತಂಡ ಕೆಲವೇ ದಿನಗಳಲ್ಲಿ ಗ್ರಾಮದ ಎಲ್ಲಾ ಮನೆಗಳಿಗೂ ವಿದ್ಯುತ್‌ ಸಂಪರ್ಕ ಕಲ್ಪಿಸಿಕೊಟ್ಟಿದೆ.