ನವದೆಹಲಿ(ನ.25): ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗಳ ಪ್ರಯಾಣಕ್ಕೆಂದೇ ವಿಶೇಷವಾಗಿ ಸಿದ್ಧ ಪಡಿಸಲಾದ, ಕ್ಷಿಪಣಿ ದಾಳಿ ತಡೆಯಬಲ್ಲ ‘ಏರ್‌ ಇಂಡಿಯಾ ಒನ್‌’ ವಿಮಾನದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಮಂಗಳವಾರ ಉದ್ಘಾಟನಾ ಸಂಚಾರ ಮಾಡಿದರು.

ತಿರುಪತಿ ದೇಗುಲ ಭೇಟಿಗಾಗಿ ರಾಷ್ಟ್ರಪತಿ ಕೋವಿಂದ್‌ ಅವರು ದೆಹಲಿಯಿಂದ ಚೆನ್ನೈಗೆ ತೆರಳಿದ ವೇಳೆ ಈ ವಿಮಾನ ಬಳಸಿದರು ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ. ‘ಏರ್‌ ಇಂಡಿಯಾ ಒನ್‌-ಬಿ777’ ಮಾದರಿಯ ವಿಮಾನ ಇದಾಗಿದ್ದು, ಮಿಸೈಲ್‌ ದಾಳಿಗೆ ಪ್ರತಿರೋಧ ಒಡ್ಡಬಲ್ಲ ಹಾಗೂ ದಾಳಿಯ ಬಗ್ಗೆ ಮುನ್ಸೂಚನೆ ನೀಡಬಲ್ಲ ಅತ್ಯಾಧುನಿಕ ಸೌಲಭ್ಯ ಹಾಗೂ ಭದ್ರತಾ ವ್ಯವಸ್ಥೆಗಳನ್ನು ಹೊಂದಿದೆ.

ಆಧುನಿಕ ಸಂಪರ್ಕ ವ್ಯವಸ್ಥೆ, ಕಾನ್ಫರೆನ್ಸ್‌ ರೂಮ್‌, ಪ್ರೆಸ್‌ ಮೀಟ್‌ ಹಾಲ್‌, ಮೆಡಿಕಲ್‌ ರೂಮ್‌ ಹೀಗೆ ಎಲ್ಲಾ ಸೌಲಭ್ಯವನ್ನು ಈ ವಿಮಾನ ಹೊಂದಿದ್ದು, ಹಾರುವ ಕಚೇರಿಯಂತೆ ಕೆಲಸ ನಿರ್ವಹಿಸುತ್ತದೆ. ಭಾರತದಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಸೇರಿ ಅತಿಗಣ್ಯರ ಸಂಚಾರಕ್ಕಾಗಿ ಒಟ್ಟು 3 ವಿಮಾನಗಳನ್ನು ತಲಾ 8400 ಕೋಟಿ ವೆಚ್ಚದಲ್ಲಿ ಖರೀದಿಸಲಾಗಿದ್ದು, ಈ ವಿಮಾನ ಕೆಲ ದಿನಗಳ ಹಿಂದಷ್ಟೆ ಅಮೆರಿಕದಿಂದ ಭಾರತಕ್ಕೆ ಬಂದಿತ್ತು. ಇನ್ನೆರಡು ವಿಮಾನಗಳು ಸದ್ಯದಲ್ಲೇ ಬರಲಿವೆ.