ಅಯೋಧ್ಯೆ(ಜೂ.11): ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕುವ ಬಹುನಿರೀಕ್ಷಿತ ಕಾರ್ಯಕ್ರಮ ಬುಧವಾರ ನಡೆಯದೇ ಹೋಗಿದೆ. ಅದರ ಬದಲಾಗಿ ಮಂದಿರ ನಿರ್ಮಾಣ ಸ್ಥಳದಲ್ಲಿ, ಶೀಘ್ರ ಕಾಮಗಾರಿ ಆರಂಭ ಮತ್ತು ನಿರ್ವಿಘ್ನವಾಗಿ ನಡೆಯಲಿ ಪ್ರಾರ್ಥಿಸಿ ರುದ್ರಾಭಿಷೇಕ ನೆರವೇರಿಸಿ ಅಡಿಗಲ್ಲು ಹಾಕುವ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಅಧ್ಯಕ್ಷ ಮಹಾಂತ ನೃತ್ಯಗೋಪಾಲ ದಾಸ್‌ ಅವರ ವಕ್ತಾರರಾದ ಮಹಾಂತ ಕಮಲ ನಯನ ದಾಸ್‌ ಅವರ ನೇತೃತ್ವದ ಪುರೋಹಿತರ ತಂಡ, ಜನ್ಮಭೂಮಿಯಲ್ಲಿರುವ ಕುಬೇರ್‌ ತಿಲಾ ದೇವಾಲಯದಲ್ಲಿ ಬೆಳಗ್ಗೆ ರುದ್ರಾಭಿಷೇಕ ನೆರವೇರಿಸಿತು. ‘ರಾಮಮಂದಿರ ನಿರ್ಮಾಣದ ಶೀಘ್ರ ಆರಂಭಕ್ಕಾಗಿ ಪ್ರಾರ್ಥನೆ ನಡೆಸಿದೆವು’ ಎಂದು ಕಾರ್ಯಕ್ರಮದ ಬಳಿಕ ದಾಸ್‌ ಹೇಳಿದರು.

ಅಲ್ಲದೆ ಅಡಿಗಲ್ಲು ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಹಿಂದೆಯೇ ಆಹ್ವಾನ ನೀಡಲಾಗಿತ್ತು. ಆದರೆ ಕೊರೋನಾ ಹಿನ್ನೆಲೆಯಲ್ಲಿ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಲಾಗಿಲ್ಲ. ಅವರನ್ನು ಇನ್ನೊಮ್ಮೆ ಭೇಟಿಯಾಗಿ ಅಡಿಗಲ್ಲು ಇಡುವ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನ ನೀಡಲಾಗುವುದು ಎಂದು ತಿಳಿಸಿದರು. ಈ ಮೂಲಕ ಕೊರೋನಾ ಬಿಕ್ಕಟ್ಟು ಮುಗಿದ ಮೇಲೆ ಇನ್ನೊಮ್ಮೆ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸುವ ಸುಳಿವು ನೀಡಿದರು. ಮೂಲಗಳ ಪ್ರಕಾರ ಜುಲೈ 2ಕ್ಕೆ ದೇವಶಯನಿ ಏಕಾದಶಿಯ ಪವಿತ್ರ ದಿನವಿದ್ದು, ಅಂದು ಕಾರ್ಯಕ್ರಮ ಆಯೋಜಿಸಲು ಟ್ರಸ್ಟ್‌ ನಿರ್ಧರಿಸಿದೆ. ಈ ಕುರಿತು ಅದು ಪ್ರಧಾನಿ ಕಾರ್ಯಾಲಯಕ್ಕೆ ಮಾಹಿತಿ ನೀಡಿದ್ದು, ಅಲ್ಲಿಂದ ಒಪ್ಪಿಗೆ ಸಿಗಬೇಕಿದೆ ಎಂದು ಮೂಲಗಳು ತಿಳಿಸಿವೆ.

ರಾಮಮಂದಿರ ನಿರ್ಮಾಣ ಶುರು, ರಾಮ ಜಪ ಮಾಡಿದ ಪ್ರಮೋದ್ ಮುತಾಲಿಕ್ ಒಂದೇ ಮಾತು

ನಡೆಯದ ಅಡಿಗಲ್ಲು:

ಕಮಲನಾರಾಯಣ ದಾಸ್‌ ಅವರು, ‘ಬುಧವಾರ ರುದ್ರಾಭಿಷೇಕ ನಡೆಸಿ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಇರಿಸಲಾಗುವುದು. 2 ತಾಸು ಈ ಸಮಾರಂಭ ನಡೆಯಲಿದೆ’ ಎಂದು ಸೋಮವಾರ ಹೇಳಿದ್ದರು. ಆದರೆ ಬುಧವಾರ ಈ ಸಮಾರಂಭಕ್ಕೆ ಟ್ರಸ್ಟ್‌ನ ಯಾವ ಸದಸ್ಯರೂ ಹಾಜರಿರಲಿಲ್ಲ.