* ಸೋನಿಯಾ, ರಾಹುಲ್‌, ಪ್ರಿಯಾಂಕಾ ಜೊತೆ ಚರ್ಚೆ* ಪ್ರಶಾಂತ್‌ ಕಿಶೋರ್‌ ಕಾಂಗ್ರೆಸ್‌ ಸೇರ್ಪಡೆ?* ಪಕ್ಷದಲ್ಲಿನ ಸ್ಥಾನ, ಲೋಕಸಭೆ, ವಿಧಾನಸಭಾ ಚುನಾವಣೆ ಪ್ರಸ್ತಾಪ

ನವದೆಹಲಿ(ಜು.15): ಬಿಜೆಪಿ, ಜೆಡಿಯು, ಡಿಎಂಕೆ, ಟಿಎಂಸಿ, ವೈಎಸ್‌ಆರ್‌ ಕಾಂಗ್ರೆಸ್‌ ಮತ್ತು ಪಂಜಾಬ್‌ನಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರದ ಗದ್ದುಗೆಗೆ ಏರಿಸಿರುವ ಹಿರಿಮೆ ಹೊಂದಿರುವ ಚುನಾವಣಾ ರಣತಂತ್ರಗಾರ ಪ್ರಶಾಂತ್‌ ಕಿಶೋರ್‌ ಇದೀಗ, ಕಾಂಗ್ರೆಸ್‌ ಪಕ್ಷ ಸೇರಲು ಸಜ್ಜಾಗಿದ್ದಾರೆ ಎಂಬ ಗುಸುಗುಸು ದೆಹಲಿ ರಾಜಕೀಯ ವಲಯದಲ್ಲಿ ಹರಡಿದೆ.

ಪ್ರಶಾಂತ್‌ ಕಿಶೋರ್‌ ಮಂಗಳವಾರ ದೆಹಲಿಯಲ್ಲಿ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ರಾಹುಲ್‌ ನಿವಾಸದಲ್ಲಿ ಸೋನಿಯಾ ಮತ್ತು ಪ್ರಿಯಾಂಕಾ ಕೂಡಾ ಹಾಜರಿದ್ದರು ಎನ್ನಲಾಗಿದೆ.

ಪಿ.ಕೆ. ಈಸ್ ಬ್ಯಾಕ್..!? ಡೆಲ್ಲಿ ರಾಜಕೀಯ ಕಟ್ಟೆಗೆ ಪ್ರಶಾಂತ್ ಕಿಶೋರ್

ಈ ಸಭೆಯಲ್ಲಿ ತಾವು ಕಾಂಗ್ರೆಸ್‌ ಸೇರಿದರೆ ಪಕ್ಷದಲ್ಲಿ ಸಿಗುವ ಸ್ಥಾನಮಾನದ ಜೊತೆಗೆ, 2024ರ ಲೋಕಸಭಾ ಚುನಾವಣೆ ಮತ್ತು ಇತರೆ ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ಕಾರ್ಯತಂತ್ರಗಳ ಬಗ್ಗೆಯೂ ಸಮಾಲೋಚನೆ ನಡೆದಿದೆ. ರಾಹುಲ್‌ ಜೊತೆ ಪ್ರಶಾಂತ್‌ ಭೇಟಿ ಇದೇ ಮೊದಲಲ್ಲ. ಈ ಮೊದಲೂ ಇಬ್ಬರೂ ಹಲವು ಬಾರಿ ರಹಸ್ಯವಾಗಿ ಭೇಟಿಯಾಗಿದ್ದಾರೆ. ಹೀಗಾಗಿ ಇದು ಅವರು ಕಾಂಗ್ರೆಸ್‌ ಸೇರುವ ಮುನ್ಸೂಚನೆ ಇರಬಹುದು ಎಂದು ಮೂಲಗಳು ತಿಳಿಸಿವೆ.

ಸಿಧು ಟ್ವೀಟ್ ಬೆನ್ನಲ್ಲೇ, ರಾಹುಲ್ ಗಾಂಧಿ ಭೇಟಿಯಾದ ಚುನಾವಣಾ ತಂತ್ರಗಾರ!

ಇದಕ್ಕೂ ಮೊದಲು ಪ್ರಶಾಂತ್‌ ಕಿಶೋರ್‌ ಜೆಡಿಯು ಸೇರಿ, ಅದರ ಉಪಾಧ್ಯಕ್ಷರಾಗಿಯೂ ನೇಮಕಗೊಂಡಿದ್ದರು. ಆದರೆ ಬಳಿಕ ನಿತೀಶ್‌ ಜೊತೆಗಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಪಕ್ಷ ತೊರೆದಿದ್ದರು.

ಪಶ್ಚಿಮ ಬಂಗಾಳ ಚುನಾವಣೆ ಬಳಿಕ ಮಾತನಾಡಿದ್ದ ಪ್ರಶಾಂತ್‌ ಕಿಶೋರ್‌, ನಾನು ಇನ್ನು ಚುನಾವಣೆ ರಣತಂತ್ರ ಹಣೆಯುವುದಿಲ್ಲ. ಬದಲಾಗಿ ಬೇರೇನಾದರೂ ಮಾಡುವ ಉದ್ದೇಶ ಹೊಂದಿರುವುದಾಗಿ ಹೇಳಿಕೊಂಡಿದ್ದರು.