ನವದೆಹಲಿ(ಆ.25): ಸುಪ್ರೀಂ ಕೋರ್ಟ್‌ ಮತ್ತು ಅದರ ನ್ಯಾಯಮೂರ್ತಿಗಳ ವಿರುದ್ಧ ಅವಹೇಳನಕಾರಿ ಟ್ವೀಟ್‌ ಮಾಡಿ ದೋಷಿ ಎನ್ನಿಸಿಕೊಂಡಿರುವ ಹಿರಿಯ ವಕೀಲ ಪ್ರಶಾಂತ ಭೂಷಣ್‌ ಅವರು ತಮ್ಮ ಹೇಳಿಕೆಯ ಬಗ್ಗೆ ಕ್ಷಮೆ ಕೇಳಲು ನಿರಾಕರಿಸಿದ್ದಾರೆ. ಕ್ಷಮೆ ಕೇಳಿದರೆ ಅದು ತಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡಂತೆ ಎಂದು ಕೋರ್ಟ್‌ಗೆ ತಿಳಿಸಿದ್ದಾರೆ.

ಶಿಕ್ಷೆಯಿಂದ ಪಾರಾಗಲು ಪ್ರಶಾಂತ್‌ ಭೂಷಣ್‌ಗೆ ಸುಪ್ರೀಂನಿಂದ ಮತ್ತೊಂದು ಚಾನ್ಸ್!

ಟ್ವೀಟ್‌ಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌, ಭೂಷಣ್‌ ಅವರನ್ನು ಜೂನ್‌ 14ರಂದು ದೋಷಿ ಎಂದು ಠರಾಯಿಸಿತ್ತು. ಬಳಿಕ ಜೂನ್‌ 20ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ಹೇಳಿತ್ತು. ಟ್ವೀಟ್‌ಗಳ ಬಗ್ಗೆ ಕ್ಷಮೆ ಕೇಳಲು ಜೂನ್‌ 20ರಂದು ಸುಪ್ರೀಂ ಕೋರ್ಟ್‌, ಭೂಷಣ್‌ ಅವರಿಗೆ 4 ದಿನಗಳ ಕಾಲಾವಕಾಶ ನೀಡಿತ್ತು.

ಆದರೆ ಕೋರ್ಟ್‌ಗೆ ಸೋಮವಾರ ಉತ್ತರ ನೀಡಿರುವ ಭೂಷಣ್‌, ‘ನನ್ನ ಭಾವನೆಯನ್ನು ನಾನು ವ್ಯಕ್ತಪಡಿಸಿದ್ದೆ. ಅದಕ್ಕೆ ಈಗಲೂ ಬದ್ಧನಾಗಿದ್ದೇನೆ. ಈಗ ಕ್ಷಮೆ ಕೇಳಿದರೆ ಅದು ನನ್ನ ಆತ್ಮಗೌರವಕ್ಕೆ ಹಾಗೂ ಸುಪ್ರೀಂ ಕೋರ್ಟ್‌ನಂತಹ ಘನತೆವೆತ್ತ ಸಂಸ್ಥೆಗೆ ನಿಂದನೆ ಮಾಡಿದಂತಾಗುತ್ತದೆ. ಷರತ್ತಿನ ಅಥವಾ ಬೇಷರತ್ತಿನ ಕ್ಷಮೆ ಕೇಳಿದರೆ ಅದು ಅವಿಧೇಯತೆ ತೋರಿದಂತಾಗುತ್ತದೆ’ ಎಂದಿದ್ದಾರೆ. ‘ಸುಪ್ರೀಂ ಕೋರ್ಟ್‌ನಂತಹ ಸಂಸ್ಥೆಯು ತನ್ನ ದಿಶೆಯಿಂದ ಆಚೆ ಹೋಗುತ್ತಿದೆ ಎಂದಾಗ ನಾನು ನನ್ನ ಅನಿಸಿಕೆ ವ್ಯಕ್ತಪಡಿಸಿದ್ದೆ. ಅದು ನನ್ನ ಕರ್ತವ್ಯವಾಗಿತ್ತು’ ಎಂದೂ ಭೂಷಣ್‌ ಹೇಳಿದ್ದಾರೆ.

ನ್ಯಾಯಾಂಗ ನಿಂದನೆ; ಪ್ರಶಾಂತ್ ಭೂಷಣ್ ದೋಷಿ, ಆ. 20 ರಂದು ಶಿಕ್ಷೆ ಪ್ರಕಟ

ಭೂಷಣ್‌ ಟ್ವೀಟ್‌ಗಳೇನು?:

ಕಳೆದ 6 ವರ್ಷದ ಇತಿಹಾಸವನ್ನು ಇತಿಹಾಸಕಾರರು ಗಮನಿಸಿದರೆ ತುರ್ತುಪರಿಸ್ಥಿತಿ ಹೇರಿಕೆ ಇಲ್ಲದೇ ಪ್ರಜಾಪ್ರಭುತ್ವವನ್ನು ಹೇಗೆ ನಾಶ ಮಾಡಲಾಗಿದೆ ಎಂಬುದು ಅರಿವಿಗೆ ಬರುತ್ತದೆ. ಅದರಲ್ಲೂ ಸುಪ್ರೀಂ ಕೋರ್ಟ್‌ ಪಾತ್ರ ಹಾಗೂ ಇತ್ತೀಚಿನ 4 ಮುಖ್ಯ ನ್ಯಾಯಮೂರ್ತಿಗಳ ಪಾತ್ರವನ್ನು ಅವರು ಗುರುತಿಸುತ್ತಾರೆ ಎಂದು ಜೂನ್‌ 27ರಂದು ಟ್ವೀಟ್‌ ಮಾಡಿದ್ದರು.

ಇನ್ನೊಂದು ಟ್ವೀಟ್‌ನಲ್ಲಿ ಅವರು ಹಾಲಿ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೋಬ್ಡೆ ಅವರು ಐಷಾರಾಮಿ ಬೈಕ್‌ನಲ್ಲಿ ಕುಳಿತ ಫೋಟೋವನ್ನು ಲಗತ್ತಿಸಿ, ‘ಮುಖ್ಯ ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟನ್ನು ಲಾಕ್‌ಡೌನ್‌ ಮೋಡ್‌ನಲ್ಲಿ ಇರಿಸಿ ಜನರ ಮೂಲಭೂತ ಹಕ್ಕನ್ನು ನಿರಾಕರಿಸುತ್ತಿದ್ದಾರೆ. ಆದರೆ ನಾಗಪುರ ರಾಜಭವನದಲ್ಲಿ ಮಾಸ್ಕ್‌ ಧರಿಸದೇ ಬಿಜೆಪಿ ನಾಯಕನೊಬ್ಬನ 50 ಲಕ್ಷ ರು. ಮೌಲ್ಯದ ಬೈಕ್‌ ಹತ್ತಿ ಕೂತಿದ್ದಾರೆ’ ಎಂದು ವ್ಯಂಗ್ಯವಾಡಿದ್ದರು. ಇದನ್ನು ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡಿತ್ತು.