ಪ್ರಶಾಂತ್ ಭೂಷಣ್ ವಿರುದ್ಧ ನ್ಯಾಯಾಂಗ ನಿಂದನೆ ತೀರ್ಪು ಮುಂದಕ್ಕೆ!
ಪ್ರಶಾಂತ ಭೂಷಣ್ ವಿರುದ್ಧ ನ್ಯಾಯಾಂಗ ನಿಂದನೆ ತೀರ್ಪು|ತೀರ್ಪು ವಾಪಸ್ ಪಡೆಯಲು ವಕೀಲರ ಒಕ್ಕೂಟ ಆಗ್ರಹ
ಶಹಾಪೂರ(ಆ.26): ಖ್ಯಾತ ಹಿರಿಯ ನ್ಯಾಯವಾದಿ ಹಾಗೂ ಹೋರಾಟಗಾರರೂ ಆದ ಪ್ರಶಾಂತ್ ಭೂಷಣ್ ಅವರ ಮೇಲಿನ ನ್ಯಾಯಾಂಗ ನಿಂದನೆ ಪ್ರಕರಣವು ನ್ಯಾಯಬದ್ಧವಾಗಿಲ್ಲ, ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಗದಾಪ್ರಹಾರ ಮಾಡಿದಂತಾಗಿದೆ ಎಂದು ಹಿರಿಯ ನ್ಯಾಯವಾದಿ ಭಾಸ್ಕರರಾವ್ ಮುಡಬೂಳ ಅಭಿಪ್ರಾಯ ವ್ಯಕ್ತಪಡಿಸಿದರು.
ತಹಸೀಲ್ ಕಾರ್ಯಾಲಯದ ಮುಂದೆ ಮಂಗಳವಾರ ಅಖಿಲ ಭಾರತ ವಕೀಲರ ಒಕ್ಕೂಟ ತಾಲೂಕ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ತಾಲೂಕ ದಂಡಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಈ ತೀರ್ಪಿನ ವಿರುದ್ಧ ಪ್ರಗತಿಪರರು, ನಿವೃತ್ತಿಯ ನ್ಯಾಯಮೂರ್ತಿಗಳು, ಸಾಹಿತಿಗಳು ಮುಂತಾದವರು ದೇಶಾದ್ಯಂತ ಹೋರಾಟವನ್ನು ಮಾಡುತ್ತಿದ್ದಾರೆ. ಈ ರೀತಿ ಪ್ರತಿಯೊಬ್ಬ ವ್ಯಕ್ತಿ ಕಾನೂನು ಅಡಿಯಲ್ಲಿ ಸಮಾನರು. ಎಷ್ಟೇ ದೊಡ್ಡ ವ್ಯಕ್ತಿ ತಪ್ಪು ಮಾಡಿದರೂ ಅದನ್ನು ಪ್ರಶ್ನಿಸುವ ಹಕ್ಕು ಪ್ರಜೆಗಳಿಗಿದೆ ಎಂದ ಭಾಸ್ಕರರಾವ್, ಮಾನ್ಯ ಸರ್ವೋಚ್ಛ ನ್ಯಾಯಾಲಯ ತೀರ್ಪನ್ನು ಪುನರ್ ಪರಿಶೀಲಿಸಲಿ. ಶಿಕ್ಷೆ ವಿಧಿಸಿದರೆ ಸಂವಿಧಾನಾತ್ಮಕವಾಗಿ ಪ್ರಜೆಗಳಿಗೆ ಮತ್ತು ಮಾಧ್ಯಮಗಳಿಗೆ ನೀಡಿದಂತಹ ಅಭಿವ್ಯಕ್ತಿಯ ಹಕ್ಕನ್ನು ಮೊಟಕುಗೊಳಿಸಿದಂತಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಖಿಲ ಭಾರತ ವಕೀಲರ ಒಕ್ಕೂಟದ ತಾಲೂಕು ಸಂಚಾಲಕರಾದ ಆರ್. ಚೆನ್ನಬಸ್ಸು ಮಾತನಾಡಿ, ವಾಸ್ತವದಲ್ಲಿ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರ ಮೇಲೆ ಭ್ರಷ್ಟಾಚಾರದ ಆರೋಪಗಳು ಹೊಸದೇನಲ್ಲ. ಪ್ರಶಾಂತ್ ಭೂಷಣ್ ಅವರು 9 ವರ್ಷಗಳ ಹಿಂದೆಯೇ ಇಂತಹ ಆರೋಪವನ್ನು ಮಾಡಿದ್ದರು. ಮತ್ತು ನ್ಯಾಯಾಲಯವು ಇದರಲ್ಲಿ ಯಾವುದೇ ದುರುದ್ದೇಶವನ್ನು ಕಂಡಿರಲಿಲ್ಲ.
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಫ್ಯಾಸಿಸ್ಟ್ ಮಾದರಿಯಲ್ಲಿ ಕತ್ತು ಹಿಸುಕುತ್ತಿರುವ ವಾತಾವರಣದಲ್ಲಿ ಸರ್ವೋಚ್ಛ ನ್ಯಾಯಾಲಯದ ಈ ತೀರ್ಪು ಸರ್ವಾಧಿಕಾರಿ ಶಕ್ತಿಗಳಿಗೆ ಇನ್ನಷ್ಟುಪುಷ್ಟಿನೀಡಿದಂತಾಗುತ್ತದೆ. ಈ ನ್ಯಾಯಾಂಗ ನಿಂದನೆ ತೀರ್ಪನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹಿರಿಯ ನ್ಯಾಯವಾದಿ, ರಾಜ್ಯ ಸಮಿತಿ ಸದಸ್ಯ ಇಬ್ರಾಹಿಂ ಸಾಬ್, ಆರ್.ಎಂ. ಹೊನ್ನಾರೆಡ್ಡಿ, ಶರಬಣ್ಣ ರಸ್ತಾಪುರ, ಮಲ್ಲಣ್ಣ ಪೂಜಾರಿ, ಮಲ್ಲಿಕಾರ್ಜುನ ಹತ್ತಿಕುಣಿ, ಯೂಸುಫ್ ಸಾಬ್ ಸಿದ್ಧೀಕಿ, ಎಂ.ಡಿ. ಪಾಟೀಲ್, ಮಲ್ಲಿಕಾರ್ಜುನ್ ಬುಕ್ಕಲ್, ಸಿದ್ದರಾಮಪ್ಪ, ದೊಡ್ಡೆಶ ದರ್ಶನಾಪುರ, ಉಮೇಶ ಬಿ. ಮುಡಬೂಳ, ಮಲ್ಲಿಕಾರ್ಜುನ ಕಾಳೆ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.