ನವದೆಹಲಿ(ಆ.15): ಮಾಜಿ ರಾಷ್ಟ್ರಪತಿ ಪಣಬ್‌ ಮುಖರ್ಜಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಇದೆ. ಆದರೆ ಚಿಂತಾಜನಕವಾಗಿಲ್ಲ ಎಂದು ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಶುಕ್ರವಾರ ತಿಳಿಸಿದ್ದಾರೆ.

ಈ ನಡುವೆ ಸೇನಾ ಆಸ್ಪತ್ರೆ, ‘ಪ್ರಣಬ್‌ ಮುಖರ್ಜಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿಲ್ಲ. ವೆಂಟಿಲೇಟರ್‌ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ತಿಳಿಸಿದೆ.

84 ವರ್ಷದ ಮುಖರ್ಜಿ ಸೋಮವಾರ ಗಂಭೀರ ಸ್ಥಿತಿಯಲ್ಲಿ ಸೇನಾ ಸಂಶೋಧನೆ ಮತ್ತು ರೆಫರಲ್‌ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಕೊರೋನಾ ಸೋಂಕಿರುವುದೂ ಪತ್ತೆಯಾಗಿತ್ತು. ಮೆದುಳಿನಲ್ಲಿ ದೊಡ್ಡ ಪ್ರಮಾಣದಲ್ಲಿ ರಕ್ತ ಹೆಪ್ಪುಗಟ್ಟಿದ್ದ ಕಾರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಇದರ ಬೆನ್ನಲ್ಲೇ ಮುಖರ್ಜಿ ಅವರ ಆರೋಗ್ಯ ಸ್ಥಿತಿ ವಿಷಮಗೊಂಡಿದೆ.

2012ರ ಜುಲೈನಿಂದ 2017ರವರೆಗೆ ಪ್ರಣಬ್‌ ಮುಖರ್ಜಿ ಅವರು ದೇಶದ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು.

ಸ್ವಾತಂತ್ರ್ಯ ದಿನದಂದು ವಿಶೇಷ ಫೋಟೋ ಟ್ವೀಟ್ ಮಾಡಿದ ಪ್ರಣಬ್ ಪುತ್ರಿ

ಇನ್ನು ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಪ್ರಣಬ್  ಮುಖರ್ಜಿ ಧ್ವಜಾರೋಹಣ ನೆರವೇರಿಸುವ ಫೋಟೋವೊಂದನ್ನು ಪುತ್ರಿ ಷರ್ಮಿಷ್ಠಾ ಶೇರ್ ಮಾಡಿಕೊಂಡಿದ್ದಾರೆ.  ಅಲ್ಲದೇ ಅವರು ಯಾವತ್ತಿಗೂ ಧ್ವಜಾರೋಹಣ ಕಾರ್ಯಕ್ರಮ ಮಿಸ್ ಆಡಿಕೊಳ್ಳುತ್ತಿರಲಿಲ್ಲ ಎಂದು ಬರೆದಿದ್ದಾರೆ.