ಪಣಜಿ(ಜ.29): ಮಹದಾಯಿ ನದಿ ನೀರು ವಿಷಯದಲ್ಲಿ ರಾಜ್ಯದ ಹಿತಾಸಕ್ತಿ ಕಾಪಾಡಲು ಅಗತ್ಯವಾದಲ್ಲಿ ಸರ್ವಪಕ್ಷದ ನಿಯೋಗದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಿದ್ಧವಿರುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಗುರುವಾರ ರಾಜ್ಯ ವಿಧಾನಸಭೆಗೆ ಭರವಸೆ ನೀಡಿದ್ದಾರೆ.

ಮಹದಾಯಿ ನದಿಯಿಂದ ರಾಜ್ಯದ ಪಾಲಿನ ನೀರು ಪಡೆದುಕೊಳ್ಳುವ ಬಗ್ಗೆ ಸರ್ಕಾರದ ಗಂಭೀರತೆ ಬಗ್ಗೆ ವಿಪಕ್ಷಗಳು ಗಮನ ಸೆಳೆವ ಸೂಚನೆ ಮಂಡಿಸಿದ್ದವು. ಇದಕ್ಕೆ ಉತ್ತರಿಸಿದ ಸಾವಂತ್‌ ‘ಪಕ್ಷ ಅಥವಾ ಇತರೆ ಯಾವುದೇ ವಿಷಯ ಕೂಡಾ ರಾಜ್ಯದ ಹಿತಾಸಕ್ತಿಗಿಂತ ಮುಖ್ಯವಲ್ಲ. ಈ ವಿಷಯದಲ್ಲಿ ನಾವು ಯಾವುದೇ ರಾಜಿಗೂ ಸಿದ್ಧವಿಲ್ಲ. ಅಗತ್ಯಬಿದ್ದಲ್ಲಿ ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಿ ಭೇಟಿ ಮಾಡಿ ಅವರ ಮಧ್ಯಪ್ರವೇಶ ಕೋರಲು ಸರ್ಕಾರ ಬದ್ಧ’ ಎಂದು ಭರವಸೆ ನೀಡಿದರು.

ಕರ್ನಾಟಕ ಜತೆ ಮಹದಾಯಿ ಮಾತುಕತೆ ಇಲ್ಲ: ಗೋವಾ!

ಇದೇ ವೇಳೆ ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ ಸಲ್ಲಿಸಿರುವ ಅರ್ಜಿ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿರುವಾಗಲೂ, ಕರ್ನಾಟಕ ನದಿಯ ನೀರನ್ನು ತನ್ನೆಡೆಗೆ ತಿರುಗಿಸಿಕೊಂಡಿದ್ದು ನಿಜ ಎಂದು ಸಿಎಂ ಸಾವಂತ್‌ ಒಪ್ಪಿಕೊಂಡರು.

ಇದಕ್ಕೂ ಮೊದಲು ಮಾತನಾಡಿದ ರಾಜ್ಯದ ಜಲಸಂಪನ್ಮೂಲ ಖಾತೆ ಸಚಿವ ಫಿಲಿಪಿ ನೇರಿ ರೋಡ್ರಿಗಸ್‌, ಗೋವಾ ನೀರನ್ನು ಕಳೆದುಕೊಂಡಿರಬಹುದು, ಆದರೆ ಕೇಸನ್ನಲ್ಲ ಎನ್ನುವ ಮೂಲಕ, ರಾಜ್ಯದ ಹಿತಾಸಕ್ತಿ ಕಾಪಾಡಲು ಸರ್ಕಾರ ಸದಾ ಸಿದ್ಧ ಎಂದು ಭರವಸೆ ನೀಡಿದರು.