ಕರ್ನಾಟಕ ಜತೆ ಮಹದಾಯಿ ಮಾತುಕತೆ ಇಲ್ಲ: ಗೋವಾ!
ಕರ್ನಾಟಕ ಜತೆ ಮಹದಾಯಿ ಮಾತುಕತೆ ಇಲ್ಲ: ಗೋವಾ| ಕೋರ್ಟ್‌ನಲ್ಲೇ ವಿಷಯ ಇತ್ಯರ್ಥ ಆಗಬೇಕು
ಪಣಜಿ(ನ.28): ಕರ್ನಾಟಕದ ಜತೆಗಿನ ಮಹದಾಯಿ ನದಿ ವಿವಾದವನ್ನು ಕೋರ್ಟ್ ಹೊರಗೆ ಇತ್ಯರ್ಥಪಡಿಸಿಕೊಳ್ಳುವ ಸಾಧ್ಯತೆಯನ್ನು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಳ್ಳಿಹಾಕಿದ್ದಾರೆ.
ಶುಕ್ರವಾರ ಪತ್ರಕರ್ತರ ಜತೆ ಮಾತನಾಡಿದ ಸಾವಂತ್, ‘ಕೋರ್ಟ್ ಹೊರಗೆ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ನಾವು ಸಿದ್ಧರಿಲ್ಲ. ನಮ್ಮ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿವೆ. ನಾವು ಅಲ್ಲಿಯೇ ಹೋರಾಡುತ್ತೇವೆ’ ಎಂದರು.
ಇತ್ತೀಚೆಗೆ ದಿಲ್ಲಿಯಲ್ಲಿನ ಕರ್ನಾಟಕ ಪ್ರತಿನಿಧಿ ಶಂಕರಗೌಡ ಪಾಟೀಲ ಅವರು ಗೋವಾಗೆ ಬಂದಿದ್ದರು. ಈ ವೇಳೆ, ‘ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಗೋವಾ ಮುಖ್ಯಮಂತ್ರಿ ಸಾವಂತ್ ಅವರು ಮಾತುಕತೆ ಮೂಲಕ ವಿವಾದ ಇತ್ಯರ್ಥಪಡಿಸಿಕೊಳ್ಳಬೇಕು’ ಎಂದಿದ್ದರು. ಅವರು ಸಾವಂತ್ ಅವರನ್ನು ಭೇಟಿಯಾಗಿದ್ದಾರೆ ಎಂದೂ ಹೇಳಲಾಗಿತ್ತು. ಈ ಬಗ್ಗೆ ಪತ್ರಕರ್ತರು ಪ್ರಶ್ನಸಿದಾಗ ಈ ಮೇಲಿನಂತೆ ಸಾವಂತ್ ಉತ್ತರಿಸಿದರು.
‘ನದಿ ತಿರುವು ಪಡೆದು ನೀರು ತಡೆಹಿಡಿದಿರುವ ಕರ್ನಾಟಕವು ಗೋವಾದತ್ತ ಪುನಃ ನೀರು ತಿರುಗಿಸಬೇಕು ಎಂಬುದು ನಮ್ಮ ವಾದ. ಮಹದಾಯಿ ನೀರಿನ ಹರಿವು ನಮ್ಮತ್ತ ಇಳಿದಿದೆ ಎಂದು ನನಗೆ ಅರಿವಿದೆ’ ಎಂದ ಸಾವಂತ್, ‘ಇತ್ತೀಚೆಗೆ ಕರ್ನಾಟಕದ ಬಿಜೆಪಿ ನಾಯಕರಾದ ರಾಜ್ಯದ ಬಿಜೆಪಿ ಉಸ್ತುವಾರಿ ಸಿ.ಟಿ. ರವಿ ಭೇಟಿ ಮಾಡಿದಾಗ, ಕರ್ನಾಟಕವು ನದಿ ತಿರುಗಿಸಿದೆ ಎಂದು ಹೇಳಿದ್ದೇನೆ’ ಎಂದರು.