ನವದೆಹಲಿ[ನ.30]: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಂತಕ ನಾಥೂರಾಮ್‌ ಗೋಡ್ಸೆಯನ್ನು ದೇಶಭಕ್ತ ಎಂದು ಲೋಕಸಭೆಯಲ್ಲಿ ಹೊಗಳುವ ಮೂಲಕ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದ ಹಾಗೂ ಸ್ವಪಕ್ಷದಿಂದಲೇ ತಪರಾಕಿ ಹಾಕಿಸಿಕೊಂಡಿದ್ದ ಭೋಪಾಲ್‌ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಕ್ಷಮೆ ಯಾಚಿಸಿದ್ದಾರೆ. ಗಾಂಧೀಜಿ ಅವರನ್ನು ಗೌರವಿಸುತ್ತೇನೆ. ದೇಶಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸುತ್ತೇನೆ ಎಂದಿದ್ದಾರೆ.

‘ನ.27ರಂದು ಎಸ್‌ಪಿಜಿ (ತಿದ್ದುಪಡಿ) ಮಸೂದೆ ಕುರಿತ ಚರ್ಚೆ ವೇಳೆ, ನಾನು ನಾಥೂರಾಮ್‌ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿಲ್ಲ. ಗೋಡ್ಸೆ ಹೆಸರನ್ನೇ ನಾನು ಪ್ರಸ್ತಾಪಿಸಿಲ್ಲ. ಆದಾಗ್ಯೂಯಾರಿಗಾದರೂ ನೋವಾಗಿದ್ದರೆ, ವಿಷಾದ ವ್ಯಕ್ತಪಡಿಸುತ್ತೇನೆ ಹಾಗೂ ಕ್ಷಮೆ ಯಾಚಿಸುತ್ತೇನೆ’ ಎಂದು ಶುಕ್ರವಾರ ಅಪರಾಹ್ನ 3ರ ವೇಳೆಗೆ ಸಾಧ್ವಿ ಲೋಕಸಭೆಯಲ್ಲಿ ಹೇಳಿದರು.

ಇದಕ್ಕೂ ಮುನ್ನ ಬೆಳಗ್ಗೆ ಲೋಕಸಭೆಯಲ್ಲಿ ಮಾತನಾಡಿದ್ದ ಪ್ರಜ್ಞಾ ಸಿಂಗ್‌, ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ, ವಿಷಾದ ವ್ಯಕ್ತಪಡಿಸಿ, ಕ್ಷಮೆ ಕೇಳುತ್ತೇನೆ. ಆದರೆ ಸದನದಲ್ಲಿ ನಾನು ಆಡಿದ ಮಾತುಗಳನ್ನು ತಿರುಚಲಾಗಿದೆ. ತಪ್ಪಾಗಿ ಬಿಂಬಿಸಲಾಗಿದೆ ಎಂದು ಹೇಳಿದರು. ಅವರ ಈ ಹೇಳಿಕೆಗೆ ಕಾಂಗ್ರೆಸ್‌ನಿಂದ ತೀವ್ರ ವಿರೋಧ ವ್ಯಕ್ತವಾಯಿತು. ಸಾಧ್ವಿ ಅವರನ್ನು ಸದನದಿಂದ ಅಮಾನತುಗೊಳಿಸಬೇಕು ಎಂದು ಸದಸ್ಯರು ಪಟ್ಟು ಹಿಡಿದರು. ಆನಂತರ ಸ್ಪೀಕರ್‌ ಬಿರ್ಲಾ ಅವರು ಸದನ ನಾಯಕರ ಸಭೆ ಕರೆದರು.

ಇದಾದ ಬಳಿಕ ಮಧ್ಯಾಹ್ನ 3ರ ಸುಮಾರಿಗೆ ಪ್ರಜ್ಞಾ ಸಿಂಗ್‌ ಮತ್ತೊಮ್ಮೆ ಕ್ಷಮಾಪಣೆ ಕೇಳಿದರು. ತಮ್ಮ ಹೇಳಿಕೆ ತಿರುಚಲಾಗಿದೆ ಎಂಬ ಅಂಶವನ್ನು ಕೈಬಿಟ್ಟರು. ನಂತರ ಸದನದ ಕಲಾಪ ಸುಸ್ಥಿತಿಗೆ ಬಂತು. ಶೂನ್ಯ ಅವಧಿ ಚರ್ಚೆಯಲ್ಲಿ ಸದಸ್ಯರು ಭಾಗಿಯಾದರು.

ಗೋಡ್ಸೆಯನ್ನು ಲೋಕಸಭೆಯಲ್ಲಿ ಹೊಗಳಿದ ಕಾರಣಕ್ಕೆ ಪ್ರಜ್ಞಾ ಸಿಂಗ್‌ ವಿರುದ್ಧ ಶಿಸ್ತು ಕ್ರಮ ಜರುಗಿಸಿದ್ದ ಬಿಜೆಪಿ, ಚಳಿಗಾಲದ ಅಧಿವೇಶನ ಮುಗಿಯುವವರೆಗೂ ಪಕ್ಷದ ಸಂಸದೀಯ ಸಭೆಯಿಂದ ನಿರ್ಬಂಧ ಹೇರಿತ್ತು. ಸಂಸತ್ತಿನ ರಕ್ಷಣಾ ಸಲಹಾ ಸಮಿತಿಯಿಂದ ಹೊರಹಾಕಿತ್ತು.