* ಕಲ್ಲಿದ್ದಲು, ಇಂಧನ ಇಲಾಖೆಗಳ ಜತೆ ಪ್ರಧಾನಿ ಸಭೆ* ಕಲ್ಲಿದ್ದಲು ಸಾಗಾಟ ಹೆಚ್ಚಿಸುವ ಕ್ರಮಗಳ ಬಗ್ಗೆ ಚರ್ಚೆ* ಕಲ್ಲಿದ್ದಲು, ವಿದ್ಯುತ್‌ ಲಭ್ಯತೆ ಬಗ್ಗೆ ಇಲಾಖೆಗಳಿಂದ ಮಾಹಿತಿ* ಕಲ್ಲಿದ್ದಲು ಸಮಸ್ಯೆ ಪರಿಹಾರಕ್ಕೆ ಮೋದಿ ಮಧ್ಯಪ್ರವೇಶ

ನವದೆಹಲಿ(ಅ.13): ಕಲ್ಲಿದ್ದಲು ಕೊರತೆ ಬಗ್ಗೆ ಹಲವು ರಾಜ್ಯಗಳು ಆತಂಕ ವ್ಯಕ್ತಪಡಿಸಿರುವ ಬೆನ್ನಲ್ಲೇ, ಈ ಸಮಸ್ಯೆ ಪರಿಹಾರಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರೇ ಮಧ್ಯಸ್ಥಿಕೆ ವಹಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ(Pralhad Joshi) ಮತ್ತು ಇಂಧನ ಸಚಿವ ಆರ್‌.ಕೆ ಸಿಂಗ್‌(RK Singh) ಅವರ ಜತೆ ಮಹತ್ವದ ಸಭೆ ನಡೆಸಿದರು. ಈ ವೇಳೆ ರಾಜ್ಯಗಳಿಗೆ ಕಲ್ಲಿದ್ದಲು ಸಾಗಾಟ ಹೆಚ್ಚಿಸಲು ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.

ಈ ಸಭೆಯಲ್ಲಿ ಬೇಡಿಕೆಯಿರುವಷ್ಟು ವಿದ್ಯುತ್‌(Electricity) ಉತ್ಪಾದನೆಗಾಗಿ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುವ ಕಲ್ಲಿದ್ದಲು(Coal) ಮೂಲಕ ವಿದ್ಯುತ್‌ ಉತ್ಪಾದಿಸುವ ಶಾಖೋತ್ಪನ್ನ ಘಟಕಗಳನ್ನು ಸದ್ಬಳಕೆ ಮಾಡಿಕೊಳ್ಳುವ ಬಗ್ಗೆಯೂ ಚರ್ಚಿಸಲಾಗಿದೆ. ಈ ವೇಳೆ ದೇಶದಲ್ಲಿ ಲಭ್ಯವಿರುವ ಕಲ್ಲಿದ್ದಲು ಮತ್ತು ವಿದ್ಯುತ್‌ ಪ್ರಮಾಣದ ಬಗ್ಗೆ ಇಂಧನ ಇಲಾಖೆ ಕಾರ್ಯದರ್ಶಿ ಅಲೋಕ್‌ ಕುಮಾರ್‌ ಮತ್ತು ಕಲ್ಲಿದ್ದಲು ಇಲಾಖೆಯ ಕಾರ್ಯದರ್ಶಿ ಎ.ಕೆ ಜೈನ್‌ ಅವರಿಂದ ಮೋದಿ ಅವರಿಗೆ ವಿವರಣೆ ಪಡೆದರು ಎಂದು ಮೂಲಗಳು ತಿಳಿಸಿವೆ.

ಈ ಸಭೆ ಬಳಿಕ ಮಾತನಾಡಿದ ಕಲ್ಲಿದ್ದಲು ಸಚಿವ ಪ್ರಹ್ಲಾದ್‌ ಜೋಶಿ ದೇಶದಲ್ಲಿ ಅಗತ್ಯವಿರುವಷ್ಟುಕಲ್ಲಿದ್ದಲು ಮತ್ತು ವಿದ್ಯುತ್‌ ಲಭ್ಯತೆಯಿದ್ದು, ಯಾರೂ ಚಿಂತಿಸಬೇಕಿಲ್ಲ ಎಂದು ಹೇಳಿದರು.

ಹಿಂದೆ ಕಲ್ಲಿ​ದ್ದಲು ಖರೀ​ದಿಸಿ ಎಂದರೆ ಕೇಳ​ಲಿ​ಲ್ಲ

ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಕಲ್ಲಿದ್ದಲಿನ ತೀವ್ರ ಕೊರತೆ ಸೃಷ್ಟಿಯಾಗಿ ವಿದ್ಯುತ್‌ ಕ್ಷಾಮದ ಆತಂಕ ಹೆಚ್ಚಾದ ಬೆನ್ನಲ್ಲೇ, ಕೇಂದ್ರ ಸರ್ಕಾ​ರವು ಈ ಸಮ​ಸ್ಯೆಗೆ ರಾಜ್ಯ​ಗಳೇ ಹೊಣೆ ಎಂದು ಮಂಗ​ಳ​ವಾರ ಕಿಡಿ​ಕಾ​ರಿದೆ. ಈ ಮೂಲಕ ಕೇಂದ್ರ​ವನ್ನು ದೂಷಿ​ಸು​ತ್ತಿ​ರುವ ರಾಜ್ಯ​ಗ​ಳಿಗೆ ತಿರು​ಗೇಟು ನೀಡಿ​ದೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಲ್ಲಿ​ದ್ದಲು ಹಾಗೂ ವಿದ್ಯುತ್‌ ಬಿಕ್ಕ​ಟ್ಟಿನ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಕಲ್ಲಿ​ದ್ದಲು ಸಚಿವ ಪ್ರಹ್ಲಾದ ಜೋಶಿ ಅವರು ಸುದ್ದಿ​ಗಾ​ರ​ರೊಂದಿಗೆ ಮಾತ​ನಾಡಿ, ‘ಈ ಹಿಂದೆ ಕಲ್ಲಿ​ದ್ದಲು ದಾಸ್ತಾನು ನಮ್ಮ ಬಳಿ ಸಾಕ​ಷ್ಟಿ​ತ್ತು. ಕಳೆದ ಜೂನ್‌​ವ​ರೆ​ಗೂ ಕಲ್ಲಿ​ದ್ದಲು ತೆಗೆ​ದು​ಕೊಳ್ಳಿ ಎಂದು ನಾವು ಹೇಳಿ​ದರೂ ರಾಜ್ಯ​ಗಳು ತಮ್ಮ ದಾಸ್ತಾ​ನನ್ನು ಹೆಚ್ಚಿ​ಸಿ​ಕೊ​ಳ್ಳಲು ನಿರಾ​ಕ​ರಿ​ಸಿ​ದ​ವು. ‘ದ​ಯ​ವಿಟ್ಟು ಕಲ್ಲಿ​ದ್ದಲು ಕಳಿ​ಸ​ಬೇ​ಡಿ’ ಎಂದು ಗೋಗ​ರೆ​ದ​ವು. ಇದೇ ಈಗಿನ ಸಮ​ಸ್ಯೆಗೆ ನಾಂದಿ ಹಾಡಿ​ದೆ’ ಎಂದು ದೂರಿ​ದ​ರು.

‘ಹೀ​ಗಾಗಿ ಕೊರತೆ ನೀಗಿ​ಸಲು ರಾಜ್ಯ​ಗಳು ದಾಸ್ತಾನು ಹೆಚ್ಚಿ​ಸಿ​ಕೊ​ಳ್ಳ​ಬೇಕು. ರಾಜ್ಯ​ಗ​ಳಿಂದ ಬಾಕಿ ಹಣ ಬರು​ವು​ದಿ​ದ್ದರೂ ನಾವು ಪೂರೈಕೆ ಮುಂದು​ವ​ರಿ​ಸಿ​ದ್ದೇ​ವೆ. ದಾಸ್ತಾನು ಹೆಚ್ಚಿ​ಸಿ​ಕೊಂಡರೆ ಸಮಸ್ಯೆ ಇರ​ದು’ ಎಂದ​ರು. ಇದೇ ವೇಳೆ, ‘ವಿದ್ಯುತ್‌ ಕ್ಷಾಮದ ಭೀತಿ ಇಲ್ಲ’ ಎಂದು ಸ್ಪಷ್ಟ​ಪ​ಡಿ​ಸಿದ ಜೋಶಿ, ‘ಕಲ್ಲಿದ್ದಲು ಸಾಕಷ್ಟುಪ್ರಮಾಣದಲ್ಲಿ ಪೂರೈಕೆಯಾಗುತ್ತಿದೆ. ಸದ್ಯ 22 ದಿನಕ್ಕಾಗುವಷ್ಟುಕಲ್ಲಿದ್ದಲು ದಾಸ್ತಾನಿದೆ’ ಎಂದ​ರು.