ಕ್ಯೂಆರ್ ಕೋಡ್ ಸ್ಕ್ಯಾನ್ ಫ್ರಾಡ್: ಪೊಲೀಸಪ್ಪನಿಗೇ ₹2.3 ಲಕ್ಷ ಪಂಗನಾಮ ಹಾಕಿದ ಸೈಬರ್ ವಂಚಕರು!
ಬೇಕರಿಯಲ್ಲಿ ತಿಂಡಿ ತಿಂದು ಬಿಲ್ ಕಟ್ಟೋಕೆ QR ಕೋಡ್ ಸ್ಕ್ಯಾನ್ ಮಾಡಿದ್ದಷ್ಟೇ ನೆನಪಿದೆ, ಪೊಲೀಸ್ ಅಧಿಕಾರಿಗೆ 2.3 ಲಕ್ಷ ರೂಪಾಯಿ ನಷ್ಟ! ಚಿನ್ನದ ಗಿರವಿ ಖಾತೆಯಿಂದ 1.9 ಲಕ್ಷ ರೂ. ವಹಿವಾಟಿಗೆ OTP ಬಂದಾಗ ಇನ್ನಷ್ಟು ಆತಂಕ.
ಪುಣೆ (ಡಿ.16): ಸೈಬರ್ ವಂಚನೆಯಲ್ಲಿ ಪೊಲೀಸ್ ಅಧಿಕಾರಿಗೆ 2.30 ಲಕ್ಷ ರೂ. ನಷ್ಟ. ಪುಣೆಯಲ್ಲಿ ಘಟನೆ ನಡೆದಿದೆ. ಬೇಕರಿಯಲ್ಲಿ ತಿಂಡಿ ತಿಂದು ಬಿಲ್ ಕಟ್ಟಲು ಹೋದಾಗಲೇ ವಂಚನೆಗೆ ಒಳಗಾಗಿದ್ದಾರೆ. QR ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸಲು ಹೋದಾಗ, ಸೇವಿಂಗ್ಸ್ ಖಾತೆಯಿಂದ 18,755 ರೂ. ಅನಧಿಕೃತವಾಗಿ ಡೆಬಿಟ್ ಆಗಿರುವುದು ಪೊಲೀಸ್ ಅಧಿಕಾರಿಯ ಗಮನಕ್ಕೆ ಬಂದಿದೆ. ಇದರಿಂದ ಆತಂಕಗೊಂಡ ಅವರು ತಮ್ಮ ಇತರ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ, ಸಂಬಳ ಖಾತೆಯಿಂದ 12,250 ರೂ. ಸೇರಿದಂತೆ ಅನಧಿಕೃತ ವಹಿವಾಟುಗಳು ನಡೆದಿರುವುದು ಕಂಡುಬಂದಿದೆ. ಖಾತೆಯಲ್ಲಿ ಕೇವಲ 50 ರೂ. ಮಾತ್ರ ಉಳಿದಿತ್ತು.
ಚಿನ್ನದ ಗಿರವಿ ಖಾತೆಯಿಂದ 1.9 ಲಕ್ಷ ರೂ. ವಹಿವಾಟಿಗೆ OTP ಬಂದಾಗ ಇನ್ನಷ್ಟು ಆತಂಕಕ್ಕೆ ಒಳಗಾದರು. OTP ನೀಡದೆಯೇ ವಹಿವಾಟು ಪೂರ್ಣಗೊಂಡಿತ್ತು. ಇದಲ್ಲದೆ, ವಂಚಕರು ಅವರ ಕ್ರೆಡಿಟ್ ಕಾರ್ಡ್ ಮಾಹಿತಿ ಬಳಸಿ 14,000 ರೂ.ಗಳ ಎರಡು ವಹಿವಾಟುಗಳನ್ನು ನಡೆಸಲು ಪ್ರಯತ್ನಿಸಿದ್ದಾರೆ. ಅದೃಷ್ಟವಶಾತ್, ತಮ್ಮ ಬ್ಯಾಂಕ್ ಖಾತೆಗಳು ಮತ್ತು ಕ್ರೆಡಿಟ್ ಕಾರ್ಡ್ ಅನ್ನು ಬ್ಲಾಕ್ ಮಾಡಿದ್ದರಿಂದ ಹೆಚ್ಚಿನ ಹಣ ನಷ್ಟವಾಗಲಿಲ್ಲ.
ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, APK ಫೈಲ್ ಮೂಲಕ ಕಾನ್ಸ್ಟೇಬಲ್ ಮೊಬೈಲ್ ಫೋನ್ ಮತ್ತು ಬ್ಯಾಂಕ್ ಖಾತೆಗಳಿಗೆ ವಂಚಕರು ಪ್ರವೇಶ ಪಡೆದಿರುವುದರಿಂದ ಹಣ ಕಳೆದುಹೋಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ತಮ್ಮ ಮೊಬೈಲ್‌ಗೆ ಬಂದಿದ್ದ ಆಪ್ ಲಿಂಕ್ ಮೇಲೆ ಕಾನ್ಸ್ಟೇಬಲ್ ಅರಿಯದೆ ಕ್ಲಿಕ್ ಮಾಡಿದ್ದರಿಂದ ಹಣ ಕಳೆದುಹೋಗಿರಬಹುದು ಎಂದು ಶಂಕಿಸಲಾಗಿದೆ. QR ಕೋಡ್ ನಲ್ಲಿ APK ಫೈಲ್ ಡೌನ್ಲೋಡ್ ಮಾಡಲು ಏನಾದರೂ ತಿರುಚಲಾಗಿದೆಯೇ ಅಥವಾ ವಂಚಕರು ಬೇರೆ ಯಾವುದೇ ತಂತ್ರಗಳನ್ನು ಬಳಸಿದ್ದಾರೆಯೇ ಎಂದು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ರಾಷ್ಟ್ರಪತಿ, ಪ್ರಧಾನಿಗೆ ಕೊಟ್ಟಂತೆ ಈ ಮರಕ್ಕೆ Z+ ಭದ್ರತೆ ಕೊಡುತ್ತಿರುವ ಸರ್ಕಾರ!
ಆನ್‌ಲೈನ್‌ನಲ್ಲಿ ಹಣ ಪಾವತಿಸುವ ಮುನ್ನ ಈ ಅಂಶಗಳ ಬಗ್ಗೆ ಗಮನವಿರಲಿ:
QR ಕೋಡ್‌ಗಳನ್ನು ಪರಿಶೀಲಿಸಿ: QR ಕೋಡ್ ಮೂಲಕ ಹಣ ಪಾವತಿಸುತ್ತಿದ್ದರೆ, ಸ್ವೀಕರಿಸುವವರು ನಂಬಿಕಸ್ಥರು ಎಂದು ಖಚಿತಪಡಿಸಿಕೊಳ್ಳಿ. ಅನುಮಾನಾಸ್ಪದ ಸ್ಥಳಗಳಲ್ಲಿ ನೀವು ಕೋಡ್‌ಗಳನ್ನು ಸ್ಕ್ಯಾನ್ ಮಾಡುವುದನ್ನು ತಪ್ಪಿಸಿ. ಸ್ವೀಕರಿಸುವವರ ಹೆಸರನ್ನು ಪರಿಶೀಲಿಸಿ.
ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ: ನಿಮ್ಮ ಮೊಬೈಲ್‌ಗೆ ಟೆಕ್ಸ್ಟ್ ಸಂದೇಶಗಳು, ಇಮೇಲ್‌ಗಳು ಅಥವಾ ಸಾಮಾಜಿಕ ಮಾಧ್ಯಮದ ಮೂಲಕ ಕಳುಹಿಸಲಾದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ. ಈ ಲಿಂಕ್‌ಗಳು ಫಿಶಿಂಗ್ ಸೈಟ್‌ಗಳಿಗೆ ಕರೆದೊಯ್ಯಬಹುದು ಅಥವಾ ನಿಮ್ಮ ಫೋನ್‌ನಲ್ಲಿ ವೈರಸ್‌ಗಳನ್ನು ಸ್ಥಾಪಿಸಬಹುದು.
ಅಧಿಕೃತ ಆ್ಯಪ್‌ಗಳನ್ನು ಮಾತ್ರ ಬಳಸಿ: ಡಿಜಿಟಲ್ ವಹಿವಾಟುಗಳಿಗೆ ಯಾವಾಗಲೂ ಅಧಿಕೃತ ಮತ್ತು ಪರಿಶೀಲಿಸಲ್ಪಟ್ಟ ಆ್ಯಪ್‌ಗಳನ್ನು ಬಳಸಿ. ನಂಬಿಕಸ್ಥ ಪ್ಲಾಟ್‌ಫಾರ್ಮ್‌ಗಳಿಂದ ಮಾತ್ರ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿ.
ಇದನ್ನೂ ಓದಿ: ಟೇಸ್ಟ್ ಅಟ್ಲಾಸ್ ಪ್ರಕಾರ ಭಾರತದ 7 ಅತ್ಯುತ್ತಮ ರೆಸ್ಟೋರೆಂಟ್‌ಗಳು, ಬೆಂಗಳೂರಿನ ಏಕೈಕ ಹೋಟೆಲ್‌ಗೆ ಸ್ಥಾನ