ಲಕ್ನೋ[ಫೆ.04]: ಉತ್ತರ ಪ್ರದೇಶದ ಝಾನ್ಸಿಯ ನಿವಾಸಿಯಾಗಿರುವ ಪೊಲೀಸ್ ಪೇದೆಯೊಬ್ಬರಿಗೆ ತನ್ನದೇ ಮದುವೆ ದಿನ ಪ್ರಧಾನಿ ನರೇಂದ್ರ ಮೋದಿ ಭದ್ರತಾ ಕರ್ತವ್ಯಕ್ಕೆ ತೆರಳಬೇಕಾದ ಅನಿವಾರ್ಯತೆ ಬಂದೊದಗಿದೆ. ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ ಸ್ಟೇಬಲ್ ಆಗಿರುವ ಝಾನ್ಸಿಯ ಯಶ್ವೇಂದ್ರ ದೋಹ್ರೆ ಸದ್ಯ ಮಥುರಾದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಫೆಬ್ರವರಿ 8 ರಂದು ಲಕ್ನೋನಲ್ಲಿ ನಡೆಯುವ ಡಿಫೆನ್ಸ್ ಎಕ್ಸ್ಫೋನಲ್ಲಿ ಅವರಿಗೆ ಡ್ಯೂಟಿ ಹಾಕಲಾಗಿದ್ದು, ದುರಾದೃಷ್ಟವಶಾತ್ ಅದೇ ದಿನ ಅವರ ಮದುವೆ ನಿಶ್ಚಯವಾಗಿದೆ.

ಪೊಲೀಸ್ ಪೇದೆ ಯಶ್ವೇಂದ್ರ ದೋಹ್ರೆ ಸಹೋದರ ಈ ಕುರಿತು ಪ್ರತಿಕ್ರಿಯಿಸುತ್ತಾ 'ಲಕ್ನೋನಲ್ಲಿ ನಡೆಯಲಿರುವ  ಡಿಫೆನ್ಸ್ ಎಕ್ಸ್ಫೋನಲ್ಲಿ ಯಶ್ವೇಂದ್ರಗೆ ಡ್ಯೂಟಿ ಹಾಕಲಾಗಿದೆ. ಹೀಗಾಗಿ ಸದ್ಯ ಆತ ಲಕ್ನೋನಲ್ಲಿದ್ದಾನೆ. ಆದರೆ ಅದೇ ದಿನ ಆತನ ಮದುವೆ ನಿಶ್ಚಯವಾಗಿದೆ' ಎಂದಿದ್ದಾರೆ. ಇನ್ನು ಖುದ್ದು ಯಶ್ವೇಂದ್ರ ಈ ಕುರಿತಾಗಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡುತ್ತಾ 'ನಾನು ಜನವರಿ 31ಕ್ಕೆ ಲಕ್ನೋಗೆ ಬಂದೆ. ಫೆ. 1 ರಿಂದ 9ರವರೆಗೆ ನನಗಿಲ್ಲ ಡ್ಯೂಟಿ ನೀಡಿದ್ದಾರೆ. ಆದರೆ ಇದೇ ಅವಧಿಯಲ್ಲಿ ನನ್ನ ಮದುವೆ ದಿನಾಂಕವೂ ಫಿಕ್ಸ್ ಆಗಿದೆ' ಎಂದಿದ್ದಾರೆ.

ಪೇದೆಗೆ ರಜೆ ನೀಡುತ್ತೇವೆಂದ ಅಧಿಕಾರಿಗಳು

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಥುರಾ ಜಿಲ್ಲೆಯ SSP ಶಲಭ್ ಮಾಥುರ್ 'ಪೊಲೀಸ್ ಪೇದೆ ಮದುವೆಗೆ ರಜೆ ಕೇಳಿದ್ದರೆ, ನೀಡುತ್ತೇವೆ. ಹಲವಾರು ಬಾರಿ ದೊಡ್ಡ ಮಟ್ಟದ ಕಾರ್ಯಕ್ರಮಗಳು ನಡೆಯುವಾಗ ಪೊಲೀಸರ ಲಿಸ್ಟ್ ಕಳುಹಿಸಲಾಗುತ್ತದೆ. ಹೀಗಾಗಿ ಯಶ್ವೇಂದ್ರ ಹೆಸರು ಸೇರ್ಪಡೆಯಾಗಿರುವ ಸಾಧ್ಯತೆ ಇದೆ. ಯಶ್ವೇಂದ್ರ ರಜೆ ಕೇಳಿದ್ದಾರಾ? ಎಂದು ದೃಢಪಡಿಸಿಕೊಂಡು, ಫೆ. 8 ರಂದು ಮದುವೆ ಇದ್ದರೆ ರಜೆ ಕೊಡುತ್ತೇವೆ. ಅವರ ಸ್ಥಳಕ್ಕೆ ಮತ್ತೊಬ್ಬ ಪೇದೆಯನ್ನು ನೇಮಿಸುತ್ತೇವೆ' ಎಂದಿದ್ದಾರೆ