ಮುಂಬೈ(ಮಾ.07): ಮಹಾರಾಷ್ಟ್ರದ ಭೀಮಾ ಕೋರೆಗಾಂವ್‌ ಯುದ್ಧ ಸ್ಮಾರಕದಲ್ಲಿ ನಡೆದ ಗಲಭೆ ಪ್ರಕರಣ ಸಂಬಂಧ ಕಳೆದೆರಡು ವರ್ಷದಿಂದ ಬಂಧಿಯಾಗಿದ್ದ 81 ವರ್ಷದ  ಎಡಪಂಥೀಯ ಸಾಮಾಜಿಕ ಹೋರಾಟಗಾರ ಹಾಗೂ ಲೇಖಕ ವರವರರಾವ್‌ ಕೊನೆಗೂ ಬಿಡುಗಡೆಯಾಗಿದ್ದಾರೆ. ರಾವ್‌ರನ್ನು ಶನಿವಾರ ರಾತ್ರಿ ಸುಮಾರು 11.45ಕ್ಕೆ ಮುಂಬೈ ನಾನಾವತಿ ಆಸ್ಪತ್ರೆಯಿಂದ ಹೊರ ಬಂದಿದ್ದಾರೆ. ಕಳೆದ ತಿಂಗಳಷ್ಟೇ ಅವರಿಗೆ ಬಾಂಬೆ ಹೈಕೋರ್ಟ್ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು 6 ತಿಂಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. 

ವರವರ ರಾವ್‌ರವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಾಂಬೆ ಹೈಕೋರ್ಟ್‌ ಹಸ್ತಕ್ಷೇಪದ ಬಳಿಕ ಮಹಾರಾಷ್ಟ್ರ ಸರ್ಕಾರ ಅವರನ್ನು ನಾನಾವತಿ ಆಸ್ಪತ್ರೆಗೆ ದಾಖಲಿಸಿತ್ತು. ಅವರ ವಕೀಲೆ ಇಂದಿರಾ ಜಯ್‌ಸಿಂಗ್ ಟ್ವೀಟ್ ಮಾಡಿ ರಾವ್‌ ಬಿಡುಗಡೆ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಆರೋಗ್ಯ ಪರಿಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಷರತ್ತುಬದ್ಧ ಜಾಮೀನು ನೀಡಿರುವ ಬಾಂಬೆ ಹೈಕೋರ್ಟ್ ರಾವ್‌ ಅವರಿಗೆ ಮುಂಬೈನಲ್ಲೇ ಇರುವಂತೆ ಮತ್ತು ತನಿಖೆಗೆ ಲಭ್ಯರಿರುವಂತೆ ಸೂಚಿಸಿದೆ. ಅಂತೆಯೇ 50 ಸಾವಿರ ರು. ಮೊತ್ತದ ವೈಯಕ್ತಿಕ ಬಾಂಡ್‌ ಮತ್ತು ಇಬ್ಬರು ಜಾಮೀನುದಾರರೂ ಅಷ್ಟೇ ಮೊತ್ತದ ಬಾಂಡ್‌ ಸಲ್ಲಿಸಬೇಕು. ಅಲ್ಲದೆ ಪಾಸ್‌ಪೋರ್ಟ್‌ ಅನ್ನು ಎನ್‌ಐಎ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಪ್ರಕರಣದ ಸಹ-ಆರೋಪಿಗಳೊಂದಿಗೆ ಯಾವುದೇ ಸಂಪರ್ಕ ಹೊಂದುವಂತಿಲ್ಲ ಎಂಬ ಕಠಿಣ ಷರತ್ತುಗಳನ್ನು ವಿಧಿಸಿದೆ.

2017ರ ಡಿ.31ರಂದು ಭೀಮಾ ಕೋರೆಗಾಂವ್‌ ಯುದ್ಧ ಸ್ಮಾರಕಲ್ಲಿ ಸಭೆ ನಡೆದಿತ್ತು. ಈ ವೇಳೆ ಉದ್ರೇಕಕಾರಿ ಭಾಷಣ ಮಾಡಿ ಗಲಭೆಗೆ ಪ್ರಚೋದನೆ ನೀಡಿದರು ಎಂಬ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದರು.