ರಾಜಸ್ಥಾನದಲ್ಲಿ ಕೆಲ ಮುಸ್ಲಿಂ ಯುವಕರು ಅಪ್ರಾಪ್ತ ಹೆಣ್ಣುಮಕ್ಕಳಿಗೆ ಮೊಬೈಲ್ ನೀಡಿ ಲೈಂಗಿಕ ಶೋಷಣೆ ನಡೆಸಿ ಮತಾಂತರಕ್ಕೆ ಯತ್ನಿಸಿದ್ದಾರೆ. ಈ ಕುರಿತು 5 ಹೆಣ್ಣುಮಕ್ಕಳ ಪರಿವಾರದವರು ದೂರು ನೀಡಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಜೈಪುರ: ಮುಸಲ್ಮಾನ ಯುವಕರು ಅಪ್ರಾಪ್ತೆಯರಿಗೆ ಮೊಬೈಲ್ ನೀಡಿ ಶೋಷಣೆ, ಮತಾಂತರಕ್ಕೆ ಯತ್ನ
ಜೈಪುರ: ಕೆಲ ಮುಸಲ್ಮಾನ ಯುವಕರು ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಲೈಂಗಿಕ ಶೋಷಣೆ ನಡೆಸಿ ಅವರ ಮತಾಂತರಕ್ಕೆ ಯತ್ನಿಸಿದ ಘಟನೆ ರಾಜಸ್ಥಾನದ ಬ್ಯಾವರ್ ಜಿಲ್ಲೆಯಲ್ಲಿ ನಡೆದಿದೆ. ಈ ಕುರಿತು 5 ಹೆಣ್ಣುಮಕ್ಕಳ ಪರಿವಾರದವರು ನೀಡಿದ ದೂರಿನನ್ವಯ ಪೋಕ್ಸೋ ಕಾಯ್ದೆಯಡಿ ಶೋಷಣೆ, ಅತ್ಯಾಚಾರ, ಹಿಂಬಾಲಿಸುವಿಕೆಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಬಿಜೈ ಪೊಲೀಸ್ ಠಾಣೆಯಲ್ಲಿ 3 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಜೊತೆಗೆ, ಬಾಲಕಿಯರ ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗಿದೆ.
ಏನಿದು ಘಟನೆ?: ಆರೋಪಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಸಂತ್ರಸ್ತ ಬಾಲಕಿಯರನ್ನು ಸಂಪರ್ಕಿಸಿದ್ದರು. ಬಳಿಕ ತಮ್ಮೊಂದಿಗೆ ಮಾತನಾಡಲು ಅವರಿಗೆಲ್ಲಾ ಚೀನಾದ ಮೊಬೈಲ್‌ಗಳನ್ನು ನೀಡಿದ್ದರು. ಬಳಿಕ ಅವರನ್ನು ಲೈಂಗಿಕವಾಗಿ ಶೋಷಿಸಿದ್ದಲ್ಲದೆ, ಮತಾಂತರವಾಗುವಂತೆ ಒತ್ತಾಯಿಸಿ ಬೆದರಿಸಿದ್ದಾರೆ. ಈ ಕುರಿತು ಬಾಲಕಿಯರು ಮನೆಯಲ್ಲಿ ತಿಳಿಸಿದ್ದು, 10 ಮುಸ್ಲಿಂ ಯುವಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ 7 ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
10, 12ನೇ ತರಗತಿ ಅಂತಿಮ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಆಗಿಲ್ಲ : ಸಿಬಿಎಸ್‌ಇ ಸ್ಪಷ್ಟನೆ
ನವದೆಹಲಿ: ಕಳೆದ ಶನಿವಾರದಿಂದ ಆರಂಭವಾಗಿರುವ 10 ಮತ್ತು 12ನೇ ತರಗತಿ ಅಂತಿಮ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಜಾಲತಾಣದಲ್ಲಿ ಹಬ್ಬಿರುವ ವರದಿಗಳು ಪೂರ್ಣ ಸುಳ್ಳು ಎಂದು ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಸ್ಪಷ್ಟಪಡಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಸಿಬಿಎಸ್‌ಇ, ಜಾಲತಾಣದಲ್ಲಿ ಈ ಕುರಿತ ವರದಿಗಳನ್ನು ನಾವು ಪರಿಶೀಲಿಸಿದ್ದೇವೆ. ಆದರೆ ಇವೆಲ್ಲಾ ಸುಳ್ಳು. ಇಂಥ ಸುದ್ದಿಗಳ ಬಗ್ಗೆ ಪೋಷಕರು ಜಾಗೃತರಾಗಿರಬೇಕು. ಪರೀಕ್ಷಾ ಪ್ರಕ್ರಿಯೆಗಳನ್ನು ಹಾಳುಮಾಡುವ ಇಂಥ ಸುಳ್ಳು ಸುದ್ದಿಗಳ ಬಗ್ಗೆ ಗಮನ ನೀಡದಂತೆ ಮಕ್ಕಳಿಗೆ ಪೋಷಕರು ತಿಳಿಹೇಳಬೇಕು ಎಂದು ಮನವಿ ಮಾಡಿದೆ. ಜೊತೆಗೆ ಇಂತ ವಿಷಯಗಳ ಬಗ್ಗೆ ಇಂಥ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅದು ಎಚ್ಚರಿಸಿದೆ. 10 ಮತ್ತು 12ನೇ ತರಗತಿ ಪರೀಕ್ಷೆಗಳು ಫೆ.15ರಂದು ಆರಂಭವಾಗಿದ್ದು ಏ.4ರವರೆಗೂ ನಡೆಯಲಿದೆ.
ಖುದ್ದು ವಿಮಾನ ನಿಲ್ಧಾಣಕ್ಕೆ ತೆರಳಿ ಕತಾರ್ ದೊರೆಗೆ ಪ್ರಧಾನಿ ನರೇಂದ್ರ ಮೋದಿ ಸ್ವಾಗತ
ನವದೆಹಲಿ: ಕತಾರ್ ದೊರೆ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರು 2 ದಿನಗಳ ಭೇಟಿಗಾಗಿ ಸೋಮವಾರ ಸಂಜೆ ಭಾರತಕ್ಕೆ ಆಗಮಿಸಿದ್ದಾರೆ. ಅಪರೂಪದ ವಿದ್ಯಮಾನದಲ್ಲಿ ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಇಲ್ಲಿನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿ ಕತಾರ್ ದೊರೆಯನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಪ್ರಧಾನಿ ಮೋದಿ ವಿಶೇಷ ಆಹ್ವಾನದ ಮೇರೆಗೆ ದೊರೆ ಭಾರತಕ್ಕೆ ಆಗಮಿಸಿದ್ದಾರೆ. ಅಮೀರ್ ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದ ಬಳಿಕ ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೂ ಚರ್ಚಿಸಲಿದ್ದಾರೆ. ಕಳೆದ ವರ್ಷ ಕತಾರ್‌ನಲ್ಲಿ ದೇಶದ್ರೋಹದ ಆರೋಪದ ಮೇಲೆ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ಸೇನೆಯ 8 ನಿವೃತ್ತ ಯೋಧರನ್ನು ಮೋದಿ ಕೋರಿಕೆಯ ಮೇರೆಗೆ ಕತಾರ್ ಬಿಡುಗಡೆ ಮಾಡಿತ್ತು.
