ಪ್ರಧಾನಿ ಮೋದಿ ಪಂಜಾಬ್‌ನಲ್ಲಿನ ಪ್ರಯಾಣದ ನಡುವೆ ಆದ ಅತೀ ದೊಡ್ಡ ಭದ್ರತಾ ಲೋಪ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ. ಈ ಘಟನೆಯಲ್ಲಿ ಕರ್ತವ್ಯ ಲೋಪ ಎಸಗಿದೆ 9 ಪಂಜಾಬ್ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. 

ಚಂಡೀಘಡ(ಮಾ.14): ಪಂಜಾಬ್‌ನ 9 ಹಿರಿಯ ಪೊಲೀಸ್ ಅಧಿಕಾರಿಗಳು ಇದೀಗ ಶಿಕ್ಷೆಯ ಭೀತಿ ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣ 2022ರ ಜನವರಿ ತಿಂಗಳಲ್ಲಿ ಪಂಜಾಬ್‌ಗೆ ತೆರಳಿದ್ದ ಪ್ರಧಾನಿ ಮೋದಿ ರಸ್ತೆ ಮಾರ್ಗದ ಮೂಲಕ ಹುಸೈನಿವಾಲ ಮೂಲಕ ತೆರಳಿದ್ದರು. ಈ ವೇಳೆ ಭಾರಿ ಭದ್ರತಾ ಲೋಪವಾಗಿತ್ತು. ಮೋದಿ ಕಾರು ಪ್ರತಿಭಟನಕಾರರ ನಡುವೆ 20 ನಿಮಿಷ ಸಿಲುಕಿತ್ತು. ಈ ಪ್ರಕರಣದಲ್ಲಿ ಲೋಪ ಎಸಗಿದ 9 ಪಂಜಾಬ್ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪಂಜಾಬ್ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಕೆ ಜಂಜುವಾ ಶಿಫಾರಸು ಮಾಡಿದ್ದಾರೆ.

ಪ್ರಧಾನಿ ಮೋದಿ ಭದ್ರತಾ ಲೋಪ ಪ್ರಕರಣದಲ್ಲಿ ಅಂದಿನ ಸರ್ಕಾರದ ಮುಖ್ಯ ಕಾರ್ಯದರ್ಶಿ ಅನಿರುದ್ದ ತಿವಾರಿ, ಪಂಜಾಬ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಚಟ್ಟೋಪೋದ್ಯಾಯ, ಹಿರಿಯ ಸೂಪರಿಡೆಂಟ್ ಆಫ್ ಪೊಲೀಸ್ ಹರ್ಮನ್‌ದೀಪ್ ಸಿಂಗ್, ಚರಣಜಿತ್ ಸಿಂಗ್, ಹೆಚ್ಚುವರಿ ಡಿಜಿಪಿ ನಾಗೇಶ್ವರ್ ರಾವ್ ಹಾಗೂ ನರೇಶ್ ಅರೋರ, ಇನ್ಸ್‌ಪೆಕ್ಟರ್ ಜನರಲ್ ರಾಕೇಶ್ ಅಗರ್ವಾಲ್ ಹಾಗೂ ಇಂದರ್‌ಬೀರ್ ಸಿಂಗ್, ಡೆಪ್ಯೂಟಿ ಐಜಿ ಸುರ್ಜೀತ್ ಸಿಂಗ್( ನಿವೃತ್ತ) ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾಸರು ಮಾಡಲಾಗಿದೆ. ಪ್ರಮುಖ 9 ಅಧಿಕಾರಿಗಳು ಕರ್ತವ್ಯದಲ್ಲಿ ಲೋಪವೆಸೆಗಿದ್ದಾರೆ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ವಿಕೆ ಜಂಜುವಾ ವರದಿಯಲ್ಲಿ ಹೇಳಿದ್ದಾರೆ.

ಬ್ಯಾರಿಕೇಡ್ ಹಾರಿ ಮೋದಿ ಕಾರಿನತ್ತ ನುಗ್ಗಿದ ಬಾಲಕ, ಹುಬ್ಬಳ್ಳಿ ರೋಡ್‌ಶೋ ವೇಳೆ ಭದ್ರತಾ ವೈಫಲ್ಯ!

ಭದ್ರತಾ ಲೋಪ ಪ್ರಕರಣ
ಪಾಕ್‌ ಗಡಿಗೆ ಹೊಂದಿಕೊಂಡ ಫಿರೋಜ್‌ಪುರದಲ್ಲಿ ರಾರ‍ಯಲಿ ಮತ್ತು ಹುಸೇನಿವಾಲಾದಲ್ಲಿನ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಲುವಾಗಿ ಮೋದಿ ಪಂಜಾಬ್‌ನ ಬಠಿಂಡಾಕ್ಕೆ ಬಂದಿಳಿದಿದ್ದರು. ಅಲ್ಲಿಂದ ಅವರು ಮೊದಲಿಗೆ ಹುಸೇನಿವಾಲಾಕ್ಕೆ ಕಾಪ್ಟರ್‌ ಮೂಲಕ ತೆರಳಬೇಕಿತ್ತು. ಆದರೆ ಪ್ರತಿಕೂಲ ವಾತಾವರಣ ಇದ್ದ ಹಿನ್ನೆಲೆಯಲ್ಲಿ ಸ್ಥಳದಲ್ಲೇ 20 ನಿಮಿಷ ಕಾದ ಪ್ರಧಾನಿ, ಬಳಿಕ 2 ಗಂಟೆ ಸಮಯ ತೆಗೆದುಕೊಳ್ಳುವ ರಸ್ತೆ ಮಾರ್ಗದಲ್ಲೇ ತೆರಳಲು ನಿರ್ಧರಿಸಿದ್ದರು. ರಸ್ತೆ ಸಂಚಾರಕ್ಕೆ ಎಲ್ಲಾ ಅಗತ್ಯ ಭದ್ರತಾ ಕ್ರಮ ಕೈಗೊಂಡ ಬಗ್ಗೆ ಪಂಜಾಬ್‌ ಡಿಜಿಪಿ ಕೂಡ ಖಚಿತಪಡಿಸಿದ್ದರು.

ಪ್ರಧಾನಿ ಮೋದಿ ಬೆಂಗಳೂರು ಭೇಟಿ ವೇಳೆ ಭದ್ರತಾ ವೈಫಲ್ಯ?

ಹೀಗೆ ಪ್ರಯಾಣ ಆರಂಭಿಸಿದ ಮೋದಿ, ಹುತಾತ್ಮರ ಸ್ಮಾರಕದಿಂದ 30 ಕಿ.ಮೀ ದೂರದಲ್ಲಿನ ಪ್ಯಾರೇನಾ ಗ್ರಾಮದ ಫ್ಲೈಓವರ್‌ ಒಂದರ ಮೇಲೆ ಸಂಚರಿಸುತ್ತಿದ್ದ ವೇಳೆ ಏಕಾಏಕಿ ಎದುರಿನಲ್ಲಿ 20ಕ್ಕೂ ಹೆಚ್ಚು ಪ್ರತಿಭಟನಾಕಾರರ ತಂಡವೊಂದು ವಾಹನಗಳನ್ನು ಅಡ್ಡಗಟ್ಟಿನಿಲ್ಲಿಸಿದ್ದು ಕಂಡುಬಂದಿದೆ. ಕೂಡಲೇ ಪ್ರಧಾನಿ ಬೆಂಗಾವಲು ವಾಹನಗಳು ಸ್ಥಳದಲ್ಲೇ ವಾಹನ ನಿಲ್ಲಿಸಿದವು. ಬಳಿಕ ಸುಮಾರು 20 ನಿಮಿಷ ಪ್ರಧಾನಿ ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ ಸ್ಥಳದಲ್ಲೇ ಆತಂಕದ ಪರಿಸ್ಥಿತಿ ಎದುರಿಸಿದರು. ಆಗ ಸ್ಥಳದಲ್ಲಿನ ಭಾರೀ ಭದ್ರತಾ ಲೋಪ ವಿಶ್ಲೇಷಿಸಿದ ಪ್ರಧಾನಿಗಳ ಭದ್ರತೆಯ ಉಸ್ತುವಾರಿ ಹೊತ್ತಿರುವ ಎಸ್‌ಪಿಜಿ ತಂಡ, ಮೋದಿ ಅವರನ್ನು ಮರಳಿ ವಿಮಾನ ನಿಲ್ದಾಣಕ್ಕೆ ವಾಪಸ್‌ ಕರೆತಂದಿತು. ಪರಿಣಾಮ ತಮ್ಮೆಲ್ಲ ಕಾರ‍್ಯಕ್ರಮ ರದ್ದು ಮಾಡಿ ಮೋದಿ ನವದೆಹಲಿಗೆ ಮರಳಿದರು.